ಸರೀಸೃಪಗಳು 
ಪ್ರಾಣಿ ಸಾಮ್ರಾಜ್ಯದಲ್ಲಿ ದ್ವಿಚರಿಗಳು ಮತ್ತು ಹಕ್ಕಿ ಹಾಗೂ ಸ್ತನಿಗಳಿಗೂ ನಡುವಿನ ಶೀತರಕ್ತದ ಕಶೇರುಕಗಳು. ಸರೀಸೃಪಗಳೆಂದೂ ಕರೆಯುವುದಿದೆ. ಉರಗದ ವಿಕಾಸ ದ್ವಿಚರಿಗಳಿಂದ. ಅವು ಮೊದಲಿಗೆ ನೀರನ್ನು ಬಿಟ್ಟು ಭೂಮಿಯ ಮೇಲೆ ವಾಸಿಸಿ ವಾತಾವರಣದ ಶುಷ್ಕ ಗಾಳಿಯ ಸಹಾಯದಿಂದ ಉಸಿರಾಡುವ ಅಂಗವನ್ನು ಬೆಳೆಸಿಕೊಂಡುವು. ಆದರೆ ಮೊಟ್ಟೆಗಳನ್ನಿಡಲು ಅವು ನೀರನ್ನು ಅಶ್ರಯಿಸಬೇಕಾಗಿತ್ತು. ಕೆಲವು ದ್ವಿಚರಿಗಳು ದಿಟ್ಟತನದ ಮತ್ತೊಂದು ಹೆಜ್ಜೆಯನ್ನಿಟ್ಟು ಅಜೀವಪರ್ಯಂತ ನೆಲದ ಮೇಲೆ ವಾಸಿಸುವ ಶಕ್ತಿಯನ್ನು ಪ್ರದರ್ಶಿಸಿದವು. ಇವುಗಳಿಂದ ವಿಕಸಿಸಿದ ಪ್ರಾಣಿವರ್ಗವೇ ಉರಗಗಳು.

ಚರಿತ್ರೆ: ಬಹುಶಃ 25 ಕೋಟಿ ವರ್ಷಗಳ ಹಿಂದೆ ಪೆಲಿಯೋಜೋóಯಿಕ್ ಯುಗದ ಕೊನೆಯ ಕಲ್ಪದಲ್ಲಿ ಪ್ರಾರಂಭವಾಯಿತು. ಆರಂಭ ಸರಳ. ಆದರೆ ಮುಂದೆ ಆ ವರ್ಗದಿಂದ (ಕ್ಲಾಸ್) ಸರ್ವತೋಮುಖವಾಗಿ ವಿಕಸಿಸಿದ ಉಪವರ್ಗ, ಗಣ, ಕುಟುಂಬ ಮತ್ತು ಜಾತಿಗಳು ಅವುಗಳ ದೇಹರಚನೆಯ ವೈಶಿಷ್ಟ್ಯ. ಮಿಕ್ಕೆಲ್ಲ ಪ್ರಾಣಿಗಳಿಗಿಂತ ಭಿನ್ನವಾದ ಬೃಹದಾಕರ, ಇವು ಸೃಷ್ಟಿಯಲ್ಲೇ ಬಲು ಕುತೂಹಲಕಾರಿ ಘಟನೆಗಳು. ಉರಗಗಳು ಬಾಳಿ ಮೆರೆದ ಭೂಚರಿತ್ರೆಯ ಮೀಸೊಜೋóಯಿಕ್ ಯುಗದಲ್ಲಿ (225-65- ದ.ಲ.ವ. ಪ್ರಾಚೀನವಧಿ) ಅವು ಸಕಲ ಭೂಪ್ರದೇಶವನ್ನೂ ಆಕ್ರಮಿಸಿದ್ದವು. ಇಷ್ಟು ಮಾತ್ರವಲ್ಲ, ನದಿಗಳು, ಸರೋವರಗಳು, ವಾಯುಮಂಡಲ ಇವೆಲ್ಲವೂ ಸರೀಸೃಪಗಳ ಆವಾಸಸ್ಥಾನಗಳಾಗಿದ್ದವು. ಕೆಲವು ಸಸ್ಯಾಹಾರಿಗಳಾದರೆ ಮತ್ತೆ ಕೆಲವು ಅತಿಕ್ರೂರಿಗಳಾದ ಮಾಂಸಹಾರಿಗಳು: ಮಾಂಸಹಾರಿಗಳ ಹಾವಳಿಯನ್ನು ತಡೆಯಲಾರದೆ ಆತ್ಮಸಂರಕ್ಷಣೆಗಾಗಿ ಚಿತ್ರವಿಚಿತ್ರವಾದ ರಕ್ಷಾಕವಚಗಳನ್ನು ಬೆಳೆಸಿಕೊಂಡ ಉರಗಗಳು ಕೆಲವಾದರೆ, ಪುಷ್ಕಳವಾಗಿ ಬೆಳೆದಿದ್ದ ಸಸ್ಯವರ್ಗವನ್ನು ತಿಂದು ಕೊಬ್ಬಿ ಬೃಹದಾಕಾರವಾಗಿ ಬೆಳೆದವು. ಕೆಲವು ದ್ವಿಪಾದಿಗಳಾದರೆ ಮತ್ತೆ ಕೆಲವು ಚತುಷ್ಪಾದಿಗಳು; ಭೂಮಿಯ ಮೇಲೆ ವೇಗವಾದ ಚಲನೆಗೆ ದೇಹದ ರಚನೆಯನ್ನು ಅಳವಡಿಸಿಕೊಂಡವು ಕೆಲವಾದರೆ ಮತ್ತೆ ಕೆಲವು ನೀರಿನಲ್ಲಿ ಈಜಲು, ಗಾಳಿಯಲ್ಲಿ ಹಾರಾಡಲು ಅನುಕೂಲಿಸುವಂತೆ ದೇಹವನ್ನು ಹೊಂದಿಸಿಕೊಂಡಂಥವು. ಈ ರೀತಿ ಬಹು ಶಾಖೋಪಾಶಾಖೆಯಾಗಿ ವಿಸ್ತರಿಸುತ್ತಿದ್ದ ಸರೀಸೃಪದ ಕಾಂಡದಿಂದಲೇ ಇಂದಿನ ಸ್ತನಿಗಳು, ಪಕ್ಷಿಗಳ ಶಾಖೆಗಳೂ ವಿಕಸಿಸಿವೆ. ದೇಹ ರಚನೆಯ ವೈಶಿಷ್ಟ್ಯದೊಂದಿಗೆ ಸಂಖ್ಯಾಪ್ರಾಬಲ್ಯವೂ ಸೇರಿ ಇವು ಪ್ರಪಂಚದ ಮೂಲೆಮೂಲೆಗಳಲ್ಲೂ ವ್ಯಾಪಿಸಿ ನಿರಂಕುಶಪ್ರಭುಗಳಾಗಿ ಮೆರೆದ ಕಾಲವನ್ನು (ಭೂಚರಿತ್ರೆಯ ಮಧ್ಯ ಜೀವ ಕಲ್ಪ) `ಸರೀಸೃಪಗಳ ಸುವರ್ಣಯುಗ ಎಂದು ಕರೆಯಲಾಗಿದೆ. ವಿಸ್ಮಯ ಹುಟ್ಟಿಸುವಂಥ ಬೃಹದಾಕಾರದ ಅನೇಕಾನೇಕ ಉರಗಗಳು ನಿಸರ್ಗದ ಹೊಡೆತ ಬದಲಾವಣೆಗಳೊಂದಿಗೆ ಹೆಜ್ಜೆಯಿಡಲಾಗದೇ ಅಳಿದುಹೋದವು. ಅತಿಪರಾಕ್ರಮಿಗಳು ಗತವಂಶಿಗಳಾದವು. ಈ ಭವ್ಯ ಪೂರ್ವಜರ ಸಂತತಿಗೆ ಸೇರಿದ್ದು ಇಂದಿಗೂ ಉಳಿದಿರುವ ಉರಗಗಳು ಕೇವಲ ಕೆಲವೇ ಆದರೂ ಅವು ಸಾಕಷ್ಟು ಕುತೂಹಲಕಾರಿಗಳಾಗಿವೆ.

	ಅಮ್ನಿಯೋಟ: ಉರಗ, ಪಕ್ಷಿ ಮತ್ತು ಸ್ತನಿಗಳ ಗುಂಪು, ಈ ಪ್ರಾಣಿಗಳಲ್ಲಿ ಭ್ರೂಣಗಳನ್ನು ಆವರಿಸಿ ಆಮ್ನಿಯಾನ್ ಮತ್ತು ಆಲಂಟಾಯ್ಸ್ ಎಂಬ ಎರಡು ಮುಖ್ಯ ಭ್ರೂಣ ಪಟಲಗಳಿವೆ. ಮೊದಲಿನದು ಭ್ರೂಣಕ್ಕೆ ಒಂದು ಕೃತಕ ಜಲಾವೃತ ರಚನೆ ಒದಗಿಸುವುದು. ಎರಡನೆಯದು ಅದರ ಉಸಿರಾಟಕ್ಕೆ ನೆರವಾಗುತ್ತದೆ. ದ್ವಿಚರಿಗಳಿಂದ ಆಮ್ನಿಯೋಟ ವಿಕಸಿಸಿತು. ಇದರ ಕಾಂಡದಿಂದ ಎರಡು ಕಾಂಡಗಳು ಮುಖ್ಯವಾಗಿ ಕವಲೊಡೆದವು: 1. ಥೀರಾಪ್ಸಿಡ. ಇದು ಉರಗವರ್ಗ ಸೈನಾಪ್ಸಿ ಉಪವರ್ಗದ ಗಣ. ಈ ಶಾಖೆಯಿಂದ ಪ್ರಾಣಿಗಳ ಲಕ್ಷಣಗಳಿದ್ದ ಉರಗಗಳು ಮತ್ತು ಸ್ತನಿಗಳೂ ವಿಕಸಿಸಿದವು. 2. ಸೌರಾಪ್ಸಿಡ. ಈ ಶಾಖೆಯಿಂದ ಉರಗಗಳು ಮತ್ತು ಪಕ್ಷಿಗಳು ರೂಪುಗೊಂಡವು.

	ಗುಣಗಳು: ಉರಗವರ್ಗದ ಪ್ರಾಣಿಗಳಿಗೆ ಈ ಕೆಳಗಿನ ವಿಶಿಷ್ಟ ಗುಣಲಕ್ಷಣಗಳಿವೆ: 
1 ಅವು ಶೀತರಕ್ತ ಪ್ರಾಣಿಗಳು ಮತ್ತು ಹೆಚ್ಚಿನವು ಭೂವಾಸಿ ಚತುಷ್ಟಾದಿಗಳು. 
2 ದೇಹದ ಹೊರಹೊದಿಕೆಯಲ್ಲಿ ರಕ್ಷಣೆ ಕೊಡುವ ಗಟ್ಟಿಯಾದ ಹುರುಪೆಗಳಿವೆ. 
3 ಕೆಲವು ವೇಳೆ ಹುರುಪೆಗಳ ಕೆಳಗೆ ಗಟ್ಟಿಯಾದ ಮೂಳೆ ಫಲಕಗಳು ರೂಪುಗೊಂಡಿರುತ್ತವೆ. 
4 ಹುರುಪೆಗಳಿಲ್ಲದಿದ್ದರೆ ಹೊರಚರ್ಮ ಗಟ್ಟಿಯಾದ ಚಿಪ್ಪುಗಳ ಹೊದಿಕೆಯಂತಿರುವುದು. 
5 ಚರ್ಮಗಳಲ್ಲಿ ಗ್ರಂಥಿಗಳು ಇಲ್ಲ. 
6 ಬಲವಾದ ಕಶೇರು ಮಣಿಗಳು, ಚೆನ್ನಾಗಿ ಬೆಳೆದ ಎದೆಯ ಮೂಳೆ. ಕಡೆಯ ಪಕ್ಷ ಎರಡು ಪಕ್ಕೆಲುಬುಗಳು, ದಪ್ಪವಾದ ಭುಜಪಟ್ಟಿ ಮತ್ತು ಸೊಂಟ ಪಟ್ಟಿಗಳು ಮತ್ತು ಐದು ಬೆರಳುಗಳುಳ್ಳ ಬಲವಾದ ಎರಡು ಜೊತೆ ಕೈಕಾಲುಗಳಿವೆ. 
7 ರೂಪವೈವಿಧ್ಯವಿರುವ ತಲೆಬುರುಡೆ, ಮೊದಲನೆಯ ಅಟ್ಲಾಸ್ ಕಶೇರುಮಣಿ ಒಂದೇ ಒಂದು ಎಲುವಿನ ಗೋಳದಿಂದ (ಕೋಂಡೈಲ್)ತಲೆಬುರುಡೆಗೆ ಸೇರಿದೆ. 
8 ಸಾಮಾನ್ಯವಾಗಿ ಹಲ್ಲುಗಳು ಸರಳ ಮತ್ತು ಮೊನಚಾಗಿರುತ್ತವೆ. ಅವು ಆಹಾರಾಭ್ಯಾಸಕ್ಕೆ ತಕ್ಕಂತೆ ಮಾರ್ಪಾಡಾಗಿರುತ್ತವೆ. 
9 ಶ್ವಾಸಕೋಶಗಳು, ಉಸಿರಾಟದ ಅಂಗಗಳು. ಕಿವಿರುಗಳ ಸುಳಿವೇ ಇಲ್ಲ. ಭ್ರೂಣಾವಸ್ಥೆಯಲ್ಲಿ ಕಿವಿರನ ರಂಧ್ರವಿದ್ದರೂ ಅದು ಉಸಿರಾಟದಲ್ಲಿ ನೆರವಾಗುವುದಿಲ್ಲ. ಶ್ವಾಸೋಚ್ಛ್ವಾಸ ಕ್ರಿಯೆ ಪಕ್ಕೆಲುಬುಗಳ ಚಲನೆಯಿಂದ ನಡೆಯುತ್ತದೆ. 
10 ಹೃತ್ಕುಕ್ಷಿ ಅಪೂರ್ಣ ಮತ್ತು ಎರಡು ಭಾಗಗಳಾಗಿ ವಿಂಗಡಣೆಗೊಂಡಿದೆ. ಮೊಸಳೆಗಳ ಜಾತಿಯಲ್ಲಿ ಮಾತ್ರ ಇದು ಪೂರ್ಣವಾಗಿ ಎಡ ಮತ್ತು ಬಲಹೃತ್ಕುಕ್ಷಿಗಳಾಗಿ ಕಾಣುತ್ತದೆ. 
11 ಮಿದುಳಿನ ಉತ್ತಮಮಸ್ತಿಷ್ಕದ ಗೋಳಗಳು ದ್ವಿಚರಿಗಳಿಗಿಂತ ಹೆಚ್ಚು ಕ್ರಿಯಾಪೂರ್ಣವಾಗಿವೆ. ಹಾವುಗಳ ಹೊರತು ಮಿಕ್ಕ ಉರಗಗಳಲ್ಲಿ ಹನ್ನೆರಡು ಜೊತೆಯ ಮಿದುಳಿನ ನರಗಳಿವೆ(ಕ್ರೇನಿಯಲ್ ನರ್ವ್). 
12 ಜೀರ್ಣಾಂಗದ ಕೊಳವೆ, ವಿಸರ್ಜನಾಂಗ ಮತ್ತು ಜನನೇಂದ್ರಿಯಗಳು ಒಟ್ಟುಗೂಡಿ ಕ್ಲೋಯಕ ಎಂಬ ಭಾಗವಾಗಿ ಅದೇ ಹೆಸರಿನ ರಂಧ್ರದಿಂದ ಹೊರತೆರೆಯುತ್ತವೆ. 
13 ಉರಗಗಳು ನೆಲದ ಮೇಲೆ ದಪ್ಪವಾದ ಮೊಟ್ಟೆಗಳನ್ನಿಡುತ್ತವೆ. ಇವುಗಳಲ್ಲಿ ಭ್ರೂಣದ ಬೆಳೆವಣಿಗೆಗೆ ಬೇಕಾದ ತತ್ತಿಯ ಹಳದಿಭಂಡಾರ (ಯೋಕ್) ಹೆಚ್ಚು ಪ್ರಮಾಣದಲ್ಲಿರುವುದು. ಮೊಟ್ಟೆಗಳು ಸಚ್ಛಿದ್ರವಾದ ಸುಣ್ಣದ ಚಿಪ್ಪಿನಿಂದ ಸುರಕ್ಷಿತವಾಗಿರುತ್ತವೆ.
14 ಭ್ರೂಣವನ್ನು ಎರಡು ಗರ್ಭಸಂರಕ್ಷಣಾ ಪಟಲಗಳು (ಆಮ್ನಿಯಾನ್ ಮತ್ತು ಅಲಂಟಾಯ್ಸ್) ಆವರಿಸಿವೆ. ಅಲಂಟಾಯ್ಸ್ ಪಟಲ ಭ್ರೂಣದ ಉಸಿರಾಟದಲ್ಲಿ ನೆರವಾಗುವುದು.

	ಉರಗಗಳ ತಲೆಬುರುಡೆಗಳ ಅಭ್ಯಾಸದಿಂದ ಈ ವರ್ಗದ ವಿಕಸನ ಹಂತಗಳನ್ನು ಅರ್ಥಮಾಡಿಕೊಳ್ಳಬಹುದು, ತಲೆಬುರುಡೆ ಎರಡು ಮುಖ್ಯ ಕೆಲಸಗಳನ್ನು ಸಾಧಿಸುತ್ತದೆ: 1 ಜ್ಞಾನೇಂದ್ರಿಯಗಳ ರಕ್ಷಣೆ: 2 ಕೆಳದವಡೆಯ ಚಲನೆಗೆ ಸಹಾಯಕವಾದ ಮಾಂಸಖಂಡಗಳನ್ನು ಮತ್ತು ಬುರುಡೆಯನ್ನು ಬೆನ್ನೆಲುಬಿಗೆ ಸೇರಿಸುವ ಮಾಂಸಖಂಡಗಳನ್ನು ಬಂಧಿಸಿಡುವುದು. ಮಾಂಸಖಂಡಗಳ ಕೆಲಸದ ಶ್ರಮವನ್ನು ತಡೆದುಕೊಳ್ಳಲು ತಲೆಬುರುಡೆ ಸಾಕಷ್ಟು ಬಲವಾಗಿರಬೇಕು. ಆದರೆ ಒಟ್ಟು ಭಾಗ ಮಿತಿಯಲ್ಲೂ ಇರಬೇಕು(ಬಲಿಷ್ಠ ಮತ್ತು ಹಗುರ ಗುಣಗಳ ಸಮತೋಲನ. ಬಹುಶಃ ಇವೆರಡು ಕಾರಣಗಳು ತಲೆಬುರುಡೆಯ ವಿಕಾಸಕ್ಕೆ ಪ್ರೇರಣೆ ಕೊಟ್ಟಿರಬಹುದು. ಮಿದುಳು ಚಿಕ್ಕದಾಗಿರುವುದರಿಂದ ಬುರುಡೆಯ ಗಾತ್ರ ಚಿಕ್ಕದು. ಆದರೆ ಕಪಾಲಪ್ರದೇಶದ ಮೂಳೆಗಳು ದವಡೆಗಳ ಯಶಸ್ವೀಚಲನೆಯನ್ನು ಉಂಟುಮಾಡುವ ಮಾಂಸಖಂಡಗಳ ಅಳವಡಿಕೆಗೆ ಸ್ಥಳಾವಕಾಶ ಕೊಟ್ಟು ಬಲಿಷ್ಠವಾಗಿರಬೇಕು. ಜೊತೆಯಲ್ಲೇ ಹಗುರವಾಗಿರಲೂಬೇಕು. ಈ ಕಾರಣದಿಂದಲೇ, ಬುರುಡೆಯ ಛಾವಣಿ ಮತ್ತು ಪಾಶ್ರ್ವಗಳ ಕೆಲವು ಮೂಳೆಗಳು ಬಲಿಷ್ಠವಾಗಿ ಜೋಡಣೆಗೊಂಡಿದ್ದರೂ ಅವುಗಳ ಮಧ್ಯೆ ಕೆಲವು ಬೃಹದ್ರಂಧ್ರಗಳು (ಟೆಂಪೊರಲ್ ಫಾಸ್ಸಾ) ಇರುವಂತೆ ಏರ್ಪಾಡಾಗಿದೆ. ಬೃಹದ್ರಂಧ್ರಗಳು ಮಾಂಸಖಂಡಗಳ ಅಳವಡಿಕೆಗೆ ಸ್ಥಳಾವಕಾಶ ಮಾಡಿ ಕೊಟ್ಟುವಲ್ಲದೆ ಬುರುಡೆ ಹಗುರವಾಗುವಂತೆಯೂ ಮಾಡಿದವು.

	ತಲೆಬುರುಡೆಯ ಕಪಾಲಭಾಗದ ಎಲುಬುಗಳ ರಚನೆ ಮತ್ತು ಅಲ್ಲಿರುವ ಬೃಹದ್ರಂಧ್ರಗಳ ಆಧಾರದ ಮೇಲೆ ಉರಗಗಳನ್ನು ವರ್ಗೀಕರಿಸುವುದು ವಾಡಿಕೆ. ಆದಿ ಉರಗಗಳ ಕಪಾಲದ ಎಲುಬುಗಳು ಒತ್ತಾಗಿ ಜೋಡಿಸಿಕೊಂಡಿದ್ದವು. ಆಹಾರವನ್ನು ಅಗಿಯಲು ಕೆಳದವಡೆಯ ಚಲನೆ ಅನಿವಾರ್ಯವಾದಾಗ ಅದರ ಚಲನೆಗೆ ಸಹಾಯಕಾರಿಯಾದ ಮಾಂಸಖಂಡಗಳು ವಿಕಸಿಸಿದವು. ಇವುಗಳ ಸಂಕುಚನ ಮತ್ತು ವಿಕಸನೆಗೆ ಅನುಕೂಲವಾಗುವಂತೆ ಕಪಾಲದ ಎರಡು ಪಕ್ಕಗಳ ಎಲುಬುಗಳ ಜೋಡಣೆಯಲ್ಲಿ ಮಾರ್ಪಾಡಾಗಿ ಒಂದೊಂದು ಪಾಶ್ರ್ವದಲ್ಲೂ ಒಂದು ಅಥವಾ ಎರಡು ಬೃಹದ್ರಂಧ್ರಗಳೂ ಕಾಣಿಸಿಕೊಂಡವು. ಈ ವಿಕಸನವನ್ನು ಗಮನಿಸಿ ಉರಗವರ್ಗವನ್ನು ಈ ಕೆಳಗಿನ ಆರು ಉಪವರ್ಗಗಳಾಗಿ ವರ್ಗೀಕರಿಸಿದೆ: ಅನಾಪ್ಸಿಡ, ಸೈನಾಪ್ಸಿಡ, ಯೂರಾಪ್ಸಿಡ, ಲೆಪಿಡೋಸಾರಿಯ, ಆರ್ಕಿಯೋಸಾರಿಯ, ಪ್ಯಾರಾಪ್ಸಿಡ.

	ಅನಾಪ್ಸಿಡ ಉಪವರ್ಗ: ಕಪಾಲದಲ್ಲಿ ರಂಧ್ರವಿಲ್ಲದ ಉರಗಗಳು. ಇವುಗಳ ಕಪಾಲದ ಎಲುಬುಗಳು ಎಲ್ಲೆಡೆಯಲ್ಲೂ ಒತ್ತಾಗಿ ಜೋಡಿಸಿಕೊಂಡಿದ್ದು ದ್ವಿಚರಿಗಳ ಕಪಾಲವನ್ನು ಹೋಲುತ್ತಿದ್ದವು. ಈ ಉಪವರ್ಗದ ಒಂದು ಗಣ ಅಳಿದುಹೋದ ಕಾಟಿಲೋಸಾರಿಯ. ಆದಿ ಉರಗಗಳು. ಈ ಗಣದವು ಇವು ಪರ್ಮಿಯನ್ ಕಲ್ಪದ (280(225 ದ.ಲ.ವ.ಪ್ರಾಚೀನ) ಆದಿ ಭಾಗದಲ್ಲಿ ಕಾಣಿಸಿಕೊಂಡು ಟ್ರಯಾಸಿಕ್ ಕಲ್ಪದ (225(190 ದ.ಲ.ವ.ಪ್ರಾಚೀನ)ವರೆಗೆ ಬಾಳಿದವು. ಇನ್ನೊಂದು ಗಣ ಕಿಲೋನಿಯ. ಆಮೆಗಳು ಮತ್ತು ಕಡಲಾಮೆಗಳು ಈ ಗಣದವು. ಟ್ರಯಾಸಿಕ್ ಕಲ್ಪದಲ್ಲಿ ಕಾಣಿಸಿಕೊಂಡ ಇವು ಇಂದಿನವರೆಗೂ ಬಾಳಿವೆ. ಮಿಕ್ಕ ಉಪವರ್ಗದಲ್ಲಿ ಕಾಣದ ವೈಚಿತ್ರ್ಯ ಇವುಗಳ ಎಲುಬಿನ ರಚನೆಯಲ್ಲಿ ಕಾಣಿಸುತ್ತದೆ.

	ಸೈನಾಪ್ಸಿಡ ಉಪವರ್ಗ: ಕಪಾಲದ ಎರಡು ಪಕ್ಕಗಳಲ್ಲೂ ಒಂದೊಂದು ಬೃಹದ್ರಂಧ್ರ ಇದೆ. ಸೈನಾಪ್ಸಿಡದಲ್ಲಿ ಎರಡು ಪಕ್ಕಗಳಲ್ಲೂ ಒಂದೊಂದು ಬೃಹದ್ರಂಧ್ರ ಇದೆ. ಸೈನಾಪ್ಸಿಡದಲ್ಲಿ ಎರಡು ಗಣಗಳಿವೆ. ಪೆಲಿಕೋಸಾರಿಯ ಮತ್ತು ಥೀರಾಪ್ಸಿಡ. ಪೆಲಿಕೋಸಾರಿಯಗಳು ಕಾಟಿಲೋಸಾರಿಯಗಳೊಡನೆ ಬಾಳಿದವು. ಇದಕ್ಕಿಂತ ಹೆಚ್ಚು ಪರಿಷ್ಕರಿಸಿದ ಗಣ ಥೀರಾಪ್ಸಿಡ. ಇವು ಪರ್ಮಿಯನ್ ಕಲ್ಪದ ಮಧ್ಯಭಾಗದಲ್ಲಿ ಕಾಣಿಸಿಕೊಂಡು ಜೂರಾಸಿಕ್ ಕಲ್ಪದ (190(135 ದ.ಲ.ವ.ಪ್ರಾಚೀನ)ವರೆಗೆ ಬಾಳಿದವು. ಈ ಗಣದ ಅನೇಕ ಗುಂಪುಗಳಲ್ಲಿ ಸ್ತನಿಗಳ ಕಪಾಲದ ಲಕ್ಷಣಗಳು ಮಜಲು ಮಜಲಾಗಿ ಕಾಣಿಸಿಕೊಂಡವು. ಇದರಿಂದಲೇ ಈಗಿನ ಸ್ತನಿಗಳ ವಂಶಜರನ್ನು ಥೀರಾಪ್ಸಿಡ ಎಂದು ಪರಿಗಣಿಸಲಾಗಿದೆ.

ಯೂರಾಪ್ಸಿಡ ಉಪವರ್ಗ: ಬೃಹದ್ರಂಧ್ರ ಒಂದೇ, ಸ್ಥಾನ ಬೇರೆ. ಇದರಲ್ಲಿ ಹಲವಾರು ದ್ವಿಚರಿಗಳು ಸೇರಿವೆ. ಪ್ರಟೊರೊಸಾರಿಯ ಮತ್ತು ಸೌರಾಪ್ಟರಿಜಿಯ ಗಣಗಳು ಈ ಉಪವರ್ಗದವು. ಇವುಗಳ ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ.

	ಲೆಪಡೊಸಾರಿಯ ಮತ್ತು ಆರ್ಕಿಯೋಸಾರಿಯ ಉಪವರ್ಗಗಳು: ಇವೆರಡೂ ಕೂಡಿದ ಗುಂಪೇ ಡೈಆಪ್ಸಿಡ. ಇದನ್ನು ಉರಗಕಾಂಡದ ಮಧ್ಯಶಾಖೆಯೆಂದೂ, ಇದರ ಎರಡು ಮುಖ್ಯ ಉಪಶಾಖೆಗಳು ಲೆಪಿಡೋಸಾರಿಯ ಮತ್ತು ಆರ್ಕೊಸಾರಿಯಗಳೆಂದೂ ಪರಿಗಣಿಸಲಾಗಿದೆ. ಅನಾಪ್ಸಿಡ ಮತ್ತು ಸೈನಾಪ್ಸಿಡಗಳನ್ನು ಬಿಟ್ಟರೆ ಅನೇಕ ಉರಗಗಳ ಕಪಾಲದ ಒಂದೊಂದು ಪಕ್ಕದಲ್ಲಿಯೂ ಎರಡು ಬೃಹದ್‍ರಂದ್ರಗಳಿರುವುದರಿಂದ ಡೈಆಪ್ಸಿಡ ಎಂಬ ಹೆಸರು ಬಂದಿದೆ. ಲೆಪಿಡೊಸಾರಿಯ ಉಪವರ್ಗದಲ್ಲಿ ಮೂರು ಗಣಗಳಿವೆ: ಯೂಸೊಕಿಯ, ರ್ಹಿಂಕೋಸೆಫಾಲಿಯ ಮತ್ತು ಸ್ಕ್ವಮೇಟ, ಮೊದಲು ರೂಪುಗೊಂಡದ್ದು ಯೂಸೊಕಿಯ ಗಣ. ಚಿಕ್ಕ ಪ್ರಾಣಿ, ನೋಡಲು ಹಲ್ಲಿಯಂತೆ, ಗುಣಲಕ್ಷಣಗಳೂ ಬಹುಶಃ ಅದರಂತೆಯೇ ಇದ್ದಿರಬಹುದು. ಟ್ರಯಾಸಿಕ್ ಕಲ್ಪದಲ್ಲಿ ಮೈದಳೆದ ರ್ಹಿಂಕೋಸೆಫಾಲಿಯ ಗಣದ ಜೀವಂತ ಉಳಿಕೆಯೇ ನ್ಯೂಜಿóಲೆಂಡಿನ ಟ್ವಾಟರಾ (ಸ್ಪಿನೊಡನ್). ಉಳಿದ ಎಲ್ಲ ಪ್ರಬೇಧಗಳೂ ಉಪವರ್ಗದಲ್ಲಿ ತಲೆದೋರಿದ ಅಂತಿಮ ಗಣ. ಹಲ್ಲಿ ಮತ್ತು ಹಾವುಗಳು ಇದರಲ್ಲಿ ಯಶಸ್ವಿಯಾಗಿ ಬದುಕಿ ಬೆಳೆದು ಬಾಳಿದ ಪ್ರಾಣಿಗಳು.
 (ನೋಡಿ- ಕುರುಡು-ಹುಳು-(ಹಲ್ಲಿ))
 (ನೋಡಿ- ಹಾವು)

	ಆರ್ಕಿಯೋಸಾರಿಯದ ಆದಿ ಗಣ ಥೀಕೋಡಾಂಶಿಯ. ಇದರ ಕೆಲವು ಪ್ರಬೇಧಗಳ ಕಪಾಲ ರಚನೆ ಇಂದಿನ ಪಕ್ಷಿಗಳ ಕಪಾಲವನ್ನು ಹೋಲುತ್ತಿತ್ತು. ಥೀಕೋಡಾಂಟ್ ಎಂದರೆ ಗುಣಿಗಳಲ್ಲಿ ಜೋಡಣೆಗೊಂಡ ಹಲ್ಲುಗಳು ಎಂದರ್ಥ. ಆರ್ಕಿಯೋಸಾರಿಯ ಉಪವರ್ಗದ ಕ್ರಾಕೆಡೀಲಿಯ ಗಣಕ್ಕೆ ಮೊಸಳೆಗಳು ಮತ್ತು ನೆಗಳೆಗಳು ಸೇರಿವೆ. ಜೂರಾಸಿಕ್ ಕಲ್ಪದ ಆದಿಭಾಗದಲ್ಲಿ ಕಾಣಿಸಿಕೊಂಡ ಈ ಗಣ ಇಲ್ಲಿಯವರೆಗೆ ತಮ್ಮತನದಿಂದ ಬದುಕುಳಿದಿವೆ. ನೆಲದಿಂದ ನೀರಿಗೆ ಹಿಂತಿರುಗಿದ ಉರಗಗಳಲ್ಲಿ ಇದೂ ಒಂದು. ಜಲಚರಿಗಳನ್ನು ತಿಂದು ಜೀವಿಸಲು ಅನುಕೂಲವಾಗುವಂತೆ ಇದು ದೇಹವನ್ನೇನೋ ಅಳವಡಿಸಿಕೊಂಡಿತು. ಅದರೆ ಇತರ ಉರಗಗಳಿಗಿರುವಂತಹ ಶ್ವಾಸಕೋಶವೇ ಇದರ ಶ್ವಾಸಾಂಗ. ಆರ್ಕಿಯೋಸಾರಿಯದ ಮತ್ತೆರಡು ಪ್ರಮುಖ ಗಣಗಳು ಸೌರಿಶ್ಚಿಯ ಮತ್ತು ಆರ್ನಿತಿಶ್ಚಿಯ. ಸೌರಿಶ್ಚಿಯ ಗಣ ಟ್ರಿಯಾಸಿಕ್ ಕಲ್ಪದ ಅಂತ್ಯ ಭಾಗದಿಂದ ಕ್ರಟೇಷಿಯಸ್ ಕಲ್ಪದ ಅಂತ್ಯದವರೆಗೂ ಬಾಳಿದರೆ ಅರ್ನಿತಿಶ್ಚಿಯ ಗಣ ಜೂರಾಸಿಕ್ ಕಲ್ಪದ ಮಧ್ಯಭಾಗದಿಂದ ಕ್ರಿಟೇಷಿಯಸ್ ಕಲ್ಪದ ಅಂತ್ಯದವರೆಗೂ ಬಾಳಿತು. ಇವೆರಡು ಗಣಗಳ ಕುಟುಂಬಗಳನ್ನು ಒಂದಾಗಿ ಪರಿಗಣಿಸಿ ದೈತ್ಯೋರಗಗಳು ಅಥವಾ ಹೆಗ್ಗೌಳಿಗಗಳು (ಡೈನೋಸಾರ್ಸ್) ಎಂದು ಕರೆಯಲಾಗಿತ್ತು. ಆದರೆ ಈ ಎರಡು ಗಣಗಳು ಥಿಕೋಡಾಂಶಿಯ ಗಣದಿಂದ ಪ್ರತ್ಯೇಕವಾಗಿ ವಿಕಸಿಸಿದಂಥವು ಎಂದು ಹೇಳಲಾಗಿದೆ. 
ದ್ವಿಮುಖ ಬೆಳೆವಣಿಗೆಗೆ ಅವುಗಳ ನಡುಕಟ್ಟಿನ ಅಥವಾ ಸೊಂಟಪಟ್ಟಿಯ ರಚನೆ, ಸ್ವಭಾವ ಮತ್ತು ದವಡೆಯ ರಚನೆಯಲ್ಲಿನ ಭಿನ್ನತೆ ಆಧಾರ. ಸೌರಿಶ್ಚಿಯ ಗಣದಲ್ಲಿ ಹಲ್ಲಿಯಲ್ಲಿರುವಂಥ ಸೊಂಟಪಟ್ಟಿ ಇದ್ದುದರಿಂದ ಆ ಉರಗಗಳನ್ನು ಹಲ್ಲಿ ನಡುಗಟ್ಟಿನ ದೈತ್ಯೋರಗಗಳು (ಲಿಜûರ್ಡ್‍ಹಿಪ್ಡ್ ಡೈನೋಸಾರ್ಸ್) ಎಂದು ಅರ್ನಿತಿಶ್ಚಿಯ ಗಣದಲ್ಲಿ ಪಕ್ಷಿಗಳ ವಿಕಸನಕ್ಕೆ ಅನುಕೂಲವಾದ ಸೊಂಟಪಟ್ಟಿ ಇದ್ದುದರಿಂದ ಅವನ್ನು ಪಕ್ಷಿಗಳ ಸೊಂಟಪಟ್ಟಿಯ ದೈತ್ಯೋರಗಗಳೂ ಎಂದು ಕರೆಯಲಾಗಿದೆ. ಕೆಲವು ಸೌರಿಶ್ಚಚಿಯಗಳು ಚತುಷ್ಟಾದಿಗಳಾಗಿ ಬೃಹದಾಕಾರವಾಗಿ ಬೆಳೆದು ಸಸ್ಯಾಹಾರಿಗಳಾದವು. ದ್ವಿಪಾದಿಗಳು ಮಾಂಸಾಹರಿಗಳಾದವು. ಅರ್ನಿತಿಶ್ಚಿಯದ ಕುಟುಂಬಗಳು ದ್ವಿಪಾದಿಗಳಾದರೂ ಮಾಂಸಾಹಾರಿಗಳಾಗಲಿಲ್ಲ. ಆರ್ಕಿಯೋಸಾರಿಯದ ಐದನೆಯ ಗಣ ಟಿರೋಸಾರಿಯ. ಇದು ಜೂರಾಸಿಕ್ ಕಲ್ಪದ ಆದಿಭಾಗದಲ್ಲಿ ಕಾಣಿಸಿಕೊಂಡು ಕ್ರಿಟೇಷಿಯಸ್ ಕಲ್ಪದವರೆಗೂ ಬಾಳಿತು.

ಪ್ಯಾರಪ್ಸಿಡ ಉಪವರ್ಗ: ಈ ಗುಂಪಿಗೆ ಪ್ರೋಟೋಸಾರಿಯ, ಪ್ಲಿಸಿಯೋಸಾರಿಯ ಮತ್ತು ಇಕ್ತಿಯೋಸಾರಿಯಗಳನ್ನು ಸೇರಿಸಲಾಗಿದೆ. ಅನಾಪ್ಸಿಡ ಉರಗಗಳಂತೆ ಕಪಾಲದ ಪ್ರತಿಯೊಂದು ಪಾಶ್ರ್ವದಲ್ಲಿ ಒಂದು ರಂಧ್ರವಿದ್ದರೂ ಆ ರಂಧ್ರದ ಎಲುಬಿನ ಆಯಕಟ್ಟುಗಳು ಬೇರೆಯಾಗಿದ್ದವು. ಇದರಿಂದ ಈ ಮೇಲಿನ ಮೂರು ಗಣಗಳನ್ನು ಒಟ್ಟಾಗಿ ಪ್ಯಾರಾಪ್ಸಿಡ ಉರಗಗಳು ಎಂದು ಕರೆಯಲಾಗಿದೆ. ಇವು ಟ್ರಯಾಸಿಕ್ ಕಲ್ಪದ ಮಧ್ಯಭಾಗದಲ್ಲಿ ಭೂಮಿಯಿಂದ ಸಮುದ್ರಕ್ಕೆ ಮರಳಿದ ಈ ಗಣಗಳ ಪ್ರಾಣಿಗಳು ತಮ್ಮ ದೇಹರಚನೆಯನ್ನು ಮತ್ಸ್ಯವರ್ಗದ ಪ್ರಾಣಿಗಳಂತೆ ರೂಪಿಸಿಕೊಂಡವು. ಇವುಗಳಲ್ಲಿ ಹೆಚ್ಚು ಪರಿಷ್ಕರಿಸಿದ ಕುಟುಂಬಗಳು ಬಾಲದ ಸಹಾಯದಿಂದ ಚಲನೆ, ಬೆನ್ನಿನ ರೆಕ್ಕೆ ಮತ್ತು ನಾಲ್ಕು ಕಾಲುಗಳಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವ ಶಕ್ತಿ ಪಡೆದಿದ್ದವು. ಇವು ಮೀನನ್ನು ಹೆಚ್ಚು ಹೋಲುತ್ತಿದ್ದವು.

	ಅಳಿದ ಉರಗಗಳು: ಮಧ್ಯ ಜೀವಯುಗದಲ್ಲಿ ಮೆರೆದ ಅಸಂಖ್ಯಾತ ಉರಗಗಳಲ್ಲಿ 90% ನಶಿಸಿಹೋದುವೆಂದು ಹೇಳಬಹುದು. ಇವುಗಳಲ್ಲಿ ಬಹಳ ಮುಖ್ಯವಾದವು(ನೆಲವಾಸಿ ದೈತ್ಯೋರಗಗಳು(ಡೈನೋಸಾರ್ಸ್), ತಿಮಿಂಗಲವನ್ನು ಹೋಲುತ್ತಿದ್ದ ಜಲವಾಸಿ ಮತ್ಸ್ಯೋರಗಗಳು ಮತ್ತು ಖಗವಾಸಿ ಪಕ್ಷಿಗಳನ್ನು ಹೋಲುತ್ತಿದ್ದ ಹಾರುವ ಟೀರೋಡ್ಯಾಕ್ಟೈಲ ಉರಗಗಳು. ಕಾಟಿಲೋಸಾರಿಯ ಗಣದ ಉರಗಗಳು ಅತ್ಯಂತ ಆದಿಯಲ್ಲಿ ಉಗಮಗೊಂಡವು. ಇವು ಹೆಚ್ಚಾಗಿ ದ್ವಿಚರಿಗಳನ್ನು ಹೋಲುತ್ತಿದ್ದವು. ಉದರದ ಮೇಲಿನ ಚಲನೆಗೆ ಇವು ಮೊದಲಬಾರಿಗೆ ಪೀಠಿಕೆ ಹಾಕಿದವು. ಇವುಗಳ ಕಪಾಲ ದ್ವಿಚರಿಗಳ ಕಪಾಲಕ್ಕಿಂತ ಹೆಚ್ಚು ಪರಿಷ್ಕಾರಗೊಂಡಿತ್ತು. ಅಲ್ಲಿ ಮೇಲ್ಛಾವಣಿಯ ಎಲುಬುಗಳು (ರೂಟ್ ಬೋನ್ಸ್) ಪೂರ್ಣವಾಗಿದ್ದವು. ಈ ಪ್ರಾಣಿಗಳು ಸುಮಾರು 1-7 ವರೆಗೆ ಬೆಳೆದವು. ಸೈಮೂರಿಯ ಕುಟುಂಬ ಕಾಟಿಲೋಸಾರಿಯ ಗಣದಲ್ಲಿ ಅತ್ಯಂತ ಪುರಾತನವಾದದ್ದು. ಇದು ಬಹುಶಃ 30 ಕೋಟಿ ವರ್ಷಗಳ ಹಿಂದೆ ಕಾಣಿಸಿಕೊಂಡಿತು. ಇದರ ಅನೇಕ ಪಳೆಯುಳಿಕೆಗಳು ಉತ್ತರ ಅಮೇರಿಕ, ರಷ್ಯ ಮತ್ತು ಆಫ್ರಿಕಗಳಲ್ಲಿ ಸಿಕ್ಕಿರುವುದರಿಂದ ಆ ಪ್ರದೇಶಗಳಲ್ಲಿ ಇವು ಹೇರಳವಾಗಿದ್ದುವೆಂದು ಹೇಳಬಹುದು. ಸೈಮೂರಿಯ ದ್ವಿಚರಿಗಳನ್ನು ಹೋಲುತ್ತಿತ್ತು. ಅದರ ಬಾಯಲ್ಲಿ ಮೊನಚಾದ ಹಲ್ಲುಗಳಿದ್ದವು. ಕಾಟಲೋಸಾರಿಯ ಗಣದಿಂದ ಮುಂದಕ್ಕೆ ಬಹುಶಃ ಸ್ಪಷ್ಟವಾದ ಎರಡು ಕವಲುಗಳು ಕಾಣಿಸಿಕೊಂಡವು: ಕಾಪ್ಟೋರ್ಹೈನಸ್, ಡೈಡೆಕ್ಟೋಮಾರ್ಫ. ಮೊದಲಿನ ಕುಟುಂಬದ ಪ್ರಾಣಿಗಳಲ್ಲಿ ಮುಂದೆ ವಿಕಸಿಸಿದ ಸೈನಾಪ್ಸಿಡ ಉರಗಗಳ ಕೆಲವು ಲಕ್ಷಣಗಳಿದ್ದವು. ಎರಡನೆಯವುಗಳಲ್ಲಿ ಡೈಆಪ್ಸಿಡ ಉರಗಗಳ ಕಡೆಗೆ ವಿಕಸನಗೊಳ್ಳುವ ಸ್ಪಷ್ಟ ಲಕ್ಷಣಗಳಿದ್ದವು.

	ಮುಂದಿನ ಐದು ಕೋಟಿ ವರ್ಷಗಳಲ್ಲಿ ವಿವಿಧ ಜಾತಿಯ ಉರಗಗಗಳು ವಿಕಸಿಸಿದವು. ಸೈನಾಪ್ಸಿಡ ಉರಗಗಳ ಆದಿಗಣ ಪೆಲಿಕೋಸಾರಿಯ. ಇದು ಪರ್ಮಿಯನ್ ಕಲ್ಪದ ಆದಿಭಾಗದಲ್ಲಿ ಕಾಣಿಸಿಕೊಂಡಿತು (285 ದ.ಲ.ವ. ಪ್ರಾಚೀನ ಕಾಲ). ಇದರಲ್ಲಿ ಡೈಮಿಟ್ರಿಡಾನ್ ಎಂಬ ಜಾತಿ ಬಹಳ ಮುಖ್ಯವಾದದ್ದು. ಇದಕ್ಕೆ ಎದೆಗೂಡಿತ್ತು. ಪ್ರಾಣಿಯ ಉದ್ದ 10-12 ಅಡಿ. ಇದರ ಬೆನ್ನೆಲುಬಿನ ಮುಳ್ಳುಗಳು ಬಹಳ ಉದ್ದವಾಗಿದ್ದವು. ಅವನ್ನು ಚರ್ಮ ಆವರಿಸಿ ಅದು ನೋಡಲು ಹಡಗಿನ ಪಟದಂತೆ ಕಾಣಿಸುತ್ತಿತ್ತು. ಪ್ರಾಣಿಯ ಕಾಲುಗಳು ಮಾತ್ರ ಚಿಕ್ಕವಾಗಿಯೇ ಇದ್ದವು. ಅನಂತರ ವಿಕಸಿಸಿದ ಪೆಲಿಕೋಸಾರಿಯ ಗಣದ ಪ್ರಾಣಿಗಳ ಹಲ್ಲಿನ ರಚನೆಯಲ್ಲಿ ಕ್ರಮೇಣ ರೂಪಭೇದ ಕಂಡುಬರಲು ಪ್ರಾರಂಭಿಸಿತು.

	ಸೈನಾಪ್ಸಿಡ ಉರಗಗಳ ಎರಡನೆಯ ಗಣ ಪರ್ಮಿಯನ್ ಕಲ್ಪದ ಮಧ್ಯಭಾಗದಲ್ಲಿ ಕಾಣಿಸಿಕೊಂಡ ಥೀರೋಡಾಂಶಿಯ ಅಥವಾ ಥೀರಾಪ್ಸಿಡ. ಹೆಚ್ಚು ಪರಿಷ್ಕರಿಸಿದ ಈ ಗಣದ ಉರಗಗಳು ಇಂದಿನ ಸ್ತನಿಗಳ ಪೂರ್ವಜರು ಎಂದು ನಿಸ್ಸಂದೇಹವಾಗಿ ಹೇಳಬಹುದು. ಅವುಗಳ ಪಳೆಯುಳಿಕೆಗಳು ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ರಷ್ಯಗಳಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಅನೇಕವು ಮಾಂಸಾಹಾರಿ ಅಥವಾ ಕೀಟಾಹಾರಿಗಳಾಗಿದ್ದವು. ಕೆಲವು ಸಸ್ಯಾಹಾರಿಗಳು ಇದ್ದಿರಬಹುದು. ಒಂದಡಿ ಉದ್ದದ ಜಾತಿಯಿಂದ ಇಂದಿನ ಸಿಂಹದ ಗಾತ್ರದವರೆಗೆ ಬೆಳೆದ ಅನೇಕ ಜಾತಿಗಳಿದ್ದವು. ಹಲ್ಲುಗಳಲ್ಲಿ ಬಾಚಿಹಲ್ಲು, ಕೋರೆಹಲ್ಲು ಮತ್ತು ದವಡೆಹಲ್ಲುಗಳೆಂಬ ರೂಪಭೇದಗಳು ಕಾಣಿಸಿಕೊಂಡವು. ಕ್ರಮೇಣ ಕಪಾಲದ ಎಲುಬುಗಳ ಸಂಖ್ಯೆ ಕಡಿಮೆಯಾಗುತ್ತಾ, ಸ್ತನಿ ಕಪಾಲರಚನೆಯಂತೆ ರೂಪುಗೊಂಡವು. ಭುಜಪಟ್ಟಿ ಮತ್ತು ಸೊಂಟಪಟ್ಟಿಗಳು ರಚನೆಯಲ್ಲಿ ಸ್ತನಿಗಳಿಗಿರುವಂತೆಯೇ ರೂಪುಗೊಂಡವು. ಸುಮಾರು ಟ್ರಯಾಸಿಕ್ ಕಲ್ಪದ ಅಂತ್ಯಭಾಗದ ವೇಳೆಗೆ ಸಸ್ತನಿಗಳನ್ನು ಹೋಲುವ ಉರಗಗಳು ಕಾಣಿಸಿಕೊಂಡುವು. ಇವು ಯಾವುವೂ ಇಂದು ಉಳಿದಿಲ್ಲ.

	ಕಾಟಿಲೋಸಾರಿಯ ಗಣದ ಪ್ರತ್ಯೇಕವಾದ ಕವಲಿನಿಂದ ವಿಕಸಿಸಿದ ಉರಗಗಳ ಚರಿತ್ರೆ ಬೇರೆಯೇ ಇದೆ. ಅವು ಡೈಆಪ್ಸಿಡ ಉರಗಗಳು. ಇವುಗಳಲ್ಲಿ ಥೀಕೋಡಾಂಶೀಯ ಗಣದ ಉರಗಗಳು ಬಹಳ ಮುಖ್ಯವಾದವು. ಇವು ಮಾಂಸಾಹಾರಿಗಳು. ಸಾಲ್ಟೋಪಸ್ ಎಂಬ ಜೀವಿ ಈ ಗಣದ ಒಂದು ವಿಶಿಷ್ಟ ಮಾದರಿ. ಬಹಳ ಬಲಿಷ್ಠವೂ ಉದ್ದವೂ ಆಗಿದ್ದ ಹಿಂಗಾಲುಗಳು ಓಡಲು ಸಹಾಯಕವಾಗಿದ್ದರೆ ಮೊಟಕಾದ ಮುಂಗಾಲುಗಳು ಆಹಾರವನ್ನು ಬಾಚಿಕೊಳ್ಳಲೂ, ಹಿಡಿದುಕೊಳ್ಳಲೂ ಕೈಗಳಂತೆ ಸಹಾಯಕವಾಗಿದ್ದವು. ಇದರ ದೇಹ ಹಲ್ಲಿಯ ದೇಹದಂತೆ. ತಲೆ ಮೊಸಳೆಯ ತಲೆಯಂತೆ. ಉದ್ದವಾದ ಬಾಲವೂ ಇತ್ತು. ಇಂಥ ಪ್ರಾಣಿಗಳೇ ಮುಂದೆ ಕಾಣಿಸಿಕೊಂಡ ದೈತ್ಯೋರಗ ಮತ್ತು ಖಗವಾಸಿ ಟಿರೋಡ್ಯಾಕ್ಟೈಲ್ ಉರಗಗಳ ಪೂರ್ವಜರಾಗಿರಬೇಕು. ಥೀಕೋಡಾಂಶಿಯದ ಒಂದು ಉಪಗಣ ಫೈಟೋಸಾರ್ಸ್. ಇವು ಪೂರ್ವಜರಂತೆ ನಾಲ್ಕು ಕಾಲುಗಳ ಮೇಲೆ ನಡೆದವು. ಇಂದಿನ ಮೊಸಳೆಗಳನ್ನು ಇವು ಹೋಲುತ್ತಿದ್ದವು. ಉದ್ದ 25. ಫೈಟೋಸಾರ್ಸ್. ನೀರಿನಲ್ಲಿ ಅತ್ಯಂತ ಕ್ರೂರ ಪ್ರಾಣಿಗಳು. ಮೊಸಳೆಗಳಲ್ಲಿ ನಾಸಿಕರಂಧ್ರಗಳು ತಲೆಯ ಮೇಲ್ಭಾಗದಲ್ಲಿದ್ದವು.

	ಥೀಕೋಡಾಂಟ್ ಗಣದಿಂದ ಎರಡು ಸ್ಪಷ್ಟವಾದ ಶಾಖೆಗಳು ಉದ್ಭವಿಸಿದವು. ಆ ಶಾಖೆಗಳ ವಿಂಗಡಣೆಗೆ ಮುಖ್ಯ ಆಧಾರವೆಂದರೆ ಅವುಗಳ ಸೊಂಟಪಟ್ಟಿಯ ರಚನೆ ಮತ್ತು ವ್ಯತ್ಯಾಸ. ಒಂದು ಶಾಖೆ ಹಲ್ಲಿಗಳ ಸೊಂಟಪಟ್ಟಿಯುಳ್ಳ ಸೌರಿಶ್ಚಿಯ ಗಣ ಮತ್ತೊಂದು ಶಾಖೆ ಪಕ್ಷಿಗಳ ಸೊಂಟಪಟ್ಟಿಯುಳ್ಳ ಅರ್ನಿತಿಶ್ಚಿಯ ಗಣ. ಈ ಎರಡು ಗಣದ ಜೀವಿಗಳನ್ನೂ ಒಟ್ಟಾಗಿ ಡೈನೋಸಾರಿಯ ಎಂಬ ಗಣಕ್ಕೆ ಜೋಡಿಸಿ ಅವನ್ನು ಡೈನೋಸಾರ್ಸ್ ಎಂದು ಕರೆಯಲಾಗಿತ್ತು. ಆದರೆ ಆ ಎರಡು ಶಾಖೆಗಳ ಜೀವಿಗಳ ಕಪಾಲ ಮತ್ತು ಸೊಂಟಪಟ್ಟಿಯ ರಚನೆಗಳಲ್ಲಿ ವ್ಯತ್ಯಾಸವಿದ್ದವು.

	ಡೈನೊಸಾರುಗಳು: ಇವನ್ನು ಸಾಮಾನ್ಯವಾಗಿ ನಾಲ್ಕು ಉಪಗಣಗಳಾಗಿ ವಿಂಗಡಿಸಬಹುದು. 1. ಮಾಂಸಾಹಾರಿ ದ್ವಿಪಾದಿ ಡೈನೊಸಾರುಗಳು ಅಥವಾ ಥೀರೊಪೊಡ. 2. ಬೃಹದಾಕಾರದ ಚತುಷ್ಪಾದಿ ದೈತ್ಯೋರಗಗಳು ಅಥವಾ ಸೌರೊಪೊಡ. 3. ಬೃಹದಾಕಾರದ ಚತುಷ್ಪಾದಿ ದೈತ್ಯೋರಗಗಳು ಅಥವಾ ಆರ್ನಿತೋಪೊಡ. 4. ಕವಚಧಾರಿಯಾದ ದೈತ್ಯೋರಗಗಳು. ಥೀರೊಪೊಡ ಮತ್ತು ಸೌರೊಪೊಡಗಳನ್ನು ಸೌರಿಶ್ಚಿಯ ಗಣಕ್ಕೆ (ಆರ್ಡರ್) ಸೇರಿಸಿದೆ. ಮಿಕ್ಕ ಎರಡು ಬಗೆಗಳನ್ನು ಆರ್ನಿತಿಶ್ಚಿಚಿಯ ಗಣಕ್ಕೆ ಸೇರಿಸಿದೆ. ಇವೆರಡೂ ದ್ವಿಪಾದಿಗಳು. ಮಾಂಸಾಹಾರಿ ಥೀರೊಪೊಡಗಳಿಗೂ ಮತ್ತು ಸಸ್ಯಾಹಾರಿ ಆರ್ನಿತೋಪೊಡಗಳಿಗೂ ಯಾವ ಹತ್ತಿರದ ಸಂಬಂಧವೂ ಇರುವುದಿಲ್ಲ. ಅವು ಎರಡು ನಿರ್ದಿಷ್ಟ ಗಣಗಳಿಗೆ ಸೇರಿವೆ.

	ಎಷ್ಟು ಜಾತಿಯ ದೈತ್ಯೋರಗಗಳಿದ್ದುವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದುವರೆಗೆ ದೊರೆತಿರುವ ಪಳೆಯುಳಿಕೆಗಳು ನೂರಾರು ಬಗೆಯವು. ಅವುಗಳ ಸಂಖ್ಯೆ ಬಹುಶಃ 5.000 ಜಾತಿಗಳಿಗೂ ಹೆಚ್ಚು ಇತ್ತೆಂದು ಹೇಳಬಹುದು. ಪಳೆಯುಳಿಕೆಗಳು, ಇಂದಿನ ಸರೀಸೃಪಗಳ ರಚನೆ ಮತ್ತು ಸ್ವಭಾವಗಳ ಆಧಾರದ ಮೇಲೆ ದೈತ್ಯೋರಗಗಳ ಜೀವನಕ್ರಮಗಳನ್ನು ಊಹಿಸಿಬಹುದು. ವಸ್ತುಸಂಗ್ರಹಾಲಯಗಳ ಕಲಾಕಾರರು ದೈತ್ಯೋರಗಗಳ ಮಾದರಿಗಳನ್ನು ವೈಜ್ಞಾನಿಕ ಸಂಶೋಧನೆಗಳ ಮೇಲೆ ಆಧರಿಸಿ ರಚಿಸಿದ್ದಾರೆ. ಪ್ರಾರಂಭದಲ್ಲಿ ಕಾಣಿಸಿಕೊಂಡ ದೈತ್ಯೋರಗಗಳು 2-3 ಗಳಷ್ಟು ಚಿಕ್ಕದಾಗಿದ್ದರೂ ಅವು ದ್ವಿಪಾದಿಗಳು. ಅವು ಅತಿವೇಗವಾಗಿ ಚಲಿಸಿ ಇತರ ಸಣ್ಣ ಸಣ್ಣ ಉರಗಗಳನ್ನು ಬೇಟೆಯಾಡಿ ತಿನ್ನುತ್ತಿದ್ದವು. ಜೀವನ ಸಂಗ್ರಾಮದಲ್ಲಿ ಗೆದ್ದ ದೈತ್ಯೋರಗಗಳು ಸರ್ವತೋಮುಖವಾಗಿ ವಿಕಸಿಸಲು ಪ್ರಾರಂಭಿಸಿದವು.

ಸೌರಿಶ್ಚಿಯ ಗಣದ ದೈತ್ಯೋರಗಗಳು: ಈ ಗಣದ ಎರಡು ಗಣಗಳಲ್ಲಿ ಒಂದು ದ್ವಿಪಾದಿ, ಮಾಂಸಾಹಾರಿ ಥೀರೊಪೊಡಗಳು. ಮತ್ತೊಂದು ಸಸ್ಯಾಹಾರಿ ಸೌರೊಪೊಡಗಳು. ಮೊದಲಿನವು ಆದಿ ಅಥವಾ ಪುರಾತನವಾದ ಡೈನೊಸಾರುಗಳೆಂದು ಪ್ರಸಿದ್ಧವಾಗಿವೆ. ಇವು ತಮ್ಮ ಪೂರ್ವಜರಂತೆ ದ್ವಿಪಾದಿಗಳಾಗಿ ಮಾಂಸಾಹಾರಿಗಳಾಗಿದ್ದವು. ಇವುಗಳಲ್ಲಿ ಅಲ್ಲೋಸಾರಸ್ ಮತ್ತು ಟಿರಾನೊಸಾರಸ್ ರಾಕ್ಷಸ ಪ್ರವೃತ್ತಿಯ ಅತಿ ಬಲಿಷ್ಠವಾದ ಮಾಂಸಾಹಾರಿ ದೈತ್ಯೋರಗಗಳು. ಇತರ ಸರೀಸೃಪಗಳಿಗೆ ಇವು ಅತಿ ಉಪದ್ರವಕಾರಿಗಳಾಗಿದ್ದವು. ಅಲ್ಲೋಸಾರಸ್ ಉದ್ದ 330-50. ಅವಕ್ಕೆ ಘನ ಮತ್ತು ತೂಕವಾದ ಮೂಳೆಗಳಿದ್ದುದರಿಂದ ಒಟ್ಟು ತೂಕ ಹಲವಾರು ಟನ್ನುಗಳಷ್ಟೇ ಇತ್ತು. ಈ ಗಾತ್ರಕ್ಕೆ ಹೋಲಿಸುವಾಗ ಅದರ ತಲೆ ಸ್ವಲ್ಪ ಚಿಕ್ಕದೆನಿಸಿದರೂ ವಾಸ್ತವವಾಗಿ ಅದು ಇತರ ಉರಗಗಳ ತಲೆಗಿಂತ ದೊಡ್ಡದಾಗಿತ್ತು. ಬಲವಾದ ದವಡೆ, ಉದ್ದ ಮತ್ತು ಮೊನಚಾದ ಹಲ್ಲುಗಳು. ಕೈಯ್ಯ ಮೊದಲ ಮೂರು ಬೆರಳುಗಳಲ್ಲಿ ಅಗಲ ಮತ್ತು ಚೂಪು ನಖಗಳು. ಸ್ಥೂಲ ಶರೀರವನ್ನು ಹೊರಲು ಬಲಿಷ್ಟವಾದ ದಪ್ಪಕಾಲುಗಳು(ಇಷ್ಟು ಈ ಪ್ರಾಣಿಯ ವೈಶಿಷ್ಟ್ಯ ಇವು ದೈತ್ಯೋರಗಗಳನ್ನು ನಿರ್ಲಕ್ಷ್ಯದಿಂದ ಕೊಂದು ತಿನ್ನುತ್ತಿದ್ದವು. ಇದುವರೆಗೆ ಜೀವಿಸಿದ ಮಾಂಸಾಹಾರಿಗಳಲ್ಲೆಲ್ಲ ಅತ್ಯಂತ ಭೀಕರ ಮತ್ತು ಬಲಿಷ್ಠ ಪ್ರಾಣಿಯೆಂದರೆ ಮುಂದೆ ಕೆಲವು ಕೋಟಿ ವರ್ಷಗಳ ತರುವಾಯ ಕಾಣಿಸಿಕೊಂಡ ಟಿರಾನೊಸಾರ್ ಅಥವಾ ಕ್ರೂರೋರಗ. ಹಲ್ಲಿಗಳ ನಿರಂಕುಶ ಪ್ರಭು ಎಂದು ಈ ಶಬ್ದದ ಅರ್ಥ. ಇದು ಅಲ್ಲೋಸಾರನ್ನು ಹೋಲುತ್ತಿತ್ತು. ಇದರ ಉದ್ದ ತಲೆಯಿಂದ ಬಾಲದವರೆಗೆ 50. ತೂಕ 8-10ಟನ್. ಇದು ನಿಂತಾಗ 18-20 ಎತ್ತರವಾಗಿತ್ತು. ದೈತ್ಯೋರಗಗಗಳಿಗೂ ಇದು ಮೃತ್ಯುಪ್ರಾಯವಾಗಿತ್ತು. ಇಂದಿನ ಉಷ್ಟ್ರಪಕ್ಷಿಯನ್ನು ಹೋಲುವ ದೈತ್ಯೋರಗಗಳೂ ಕೂಡ ಥೀರೊಪೊಡ ಉಪಗಣಕ್ಕೆ ಸೇರಿದವು. ಅವುಗಳಲ್ಲಿ ಓವಿರಾಪ್ಟರ್ ಎಂಬ ಜೀವಿ ಸಾಧುಪ್ರಾಣಿಯಾಗಿತ್ತು. ಅದು ಇತರ ಉರಗಗಳ ಮೊಟ್ಟೆಗಳನ್ನು ಕದ್ದು ತಿನ್ನುತ್ತಿದ್ದರಿಂದ ಅದಕ್ಕೆ ಮೊಟ್ಟೆಕಳ್ಳ(ಎಗ್‍ಸ್ಟೀಲರ್) ಎಂಬ ಹೆಸರು ಇತ್ತು.

ಸೌರಪೋಡ ಉಪಗಣದ ದೈತ್ಯೋರಗಗಳು ಭೂತಾಕಾರವಾಗಿ ಬೆಳೆದವು. ಇವುಗಳಲ್ಲಿ ಮುಖ್ಯವಾದ ಜಾತಿಗಳು ಬ್ರಾಂಟೋಸಾರಸ್, ಬ್ರ್ಯಾಕಿಯೋಸಾರಸ್ ಮತ್ತು ಡಿಪ್ಲೋಡೋಕಸ್. ಅವೆಲ್ಲ ಸಸ್ಯಾಹಾರಿಗಳು. ಬಾಂಟೋಸಾರಸ್ ಇವುಗಳಲ್ಲಿ ಬಹಳ ಮುಖ್ಯವಾದದ್ದು, ಹೆಸರಿನ ಅರ್ಥ ಗುಡುಗುಹಲ್ಲಿ. ಇದರ ಉದ್ದ ತಲೆಯಿಂದ ಬಾಲದವರೆಗೆ 70-80. ಬಾಲದಷ್ಟೇ ಉದ್ದವಾದ ಬಳುಕುವ ಕತ್ತು ಇದಕ್ಕಿತ್ತು. ಸುಮಾರು 60,000 ಪೌಂಡ್ ತೂಕದ ಈ ಪ್ರಾಣಿ ಬಹುಶಃ ಆರು ಆನೆಗಳ ಗಾತ್ರಕ್ಕೆ ಸಮವಾಗಿತ್ತು. ಆದರೆ ಅತಿ ಚಿಕ್ಕದಾದ ತಲೆ, ದುರ್ಬಲವಾದ ದವಡೆ ಮತ್ತು ಹಲ್ಲುಗಳು ಅದರ ಭೂತಾಕೃತಿಗೆ ಸ್ವಲ್ಪವೂ ತಾಳೆಯಾಗುತ್ತಿರಲಿಲ್ಲ. ನೀರಿನಲ್ಲಿನ ಮೃದುಸಸ್ಯಗಳನ್ನು ತಿನ್ನಲು ಮಾತ್ರ ಆ ಹಲ್ಲುಗಳು ಸಹಕಾರಿಯಾಗಿದ್ದವು. ಮಾಂಸಾಹಾರಿಗಳಿಂದ ತಪ್ಪಿಸಿಕೊಳ್ಳಲು ಇವು ನೀರಿಗೆ ಹೋಗುತ್ತಿದ್ದಿರಬಹುದು. ಇವುಗಳ ಅವಶೇಷಗಳು ಉತ್ತರ ಅಮೆರಿಕದಲ್ಲಿ ಸಿಕ್ಕಿವೆ. ಅಮೆರಿಕದ ಪಳೆಯುಳಿಕೆಗಳ ತಜ್ಞನಾದ ಆರ್.ಬೆ.ಬರ್ಡ್ ಮತ್ತು ಆತನ ವಿದ್ಯಾರ್ಥಿಗಳು ಸೌರಾಪೊಡದ ಕಾಲಿನ ಗುರುತುಗಳಿರುವ ಶಿಲೆಗಳನ್ನು ಕಂಡುಹಿಡಿದರು. ಅದೇ ಸ್ಥಳದಲ್ಲಿ ಮಾಂಸಾಹಾರಿ ಥೀರೊಪೊಡಗಳ ಮೂರು ಬೆರಳಿನ ಕಾಲು ಗುರುತುಗಳುಳ್ಳ ಬಂಡೆಗಳೂ ದೊರೆತವು. ಇದರಿಂದ ಮಾಂಸಾಹಾರಿ ಟಿರಾನೋಸಾರುಗಳು ಈ ಸಸ್ಯಾಹಾರಿಗಳನ್ನು ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತಿದ್ದಿರಬೇಕೆಂಬ ತೀರ್ಮಾನಕ್ಕೆ ಅವರು ಬಂದರು. ದೈತ್ಯೋರಗಗಳಲ್ಲೆಲ್ಲ ಬ್ರಾಕಿಯೋಸಾರಸ್ ಅತಿ ದೊಡ್ಡದು ಮತ್ತು ತೂಕವಾದದ್ದು. ಇದರ ತೂಕ ಸುಮಾರು ಒಂದು ಲಕ್ಷ ಪೌಂಡ್ ಇದ್ದಿರಬಹುದು. ಮಾಂಸಾಹಾರಿಗಳಿಂದ ತಪ್ಪಿಸಿಕೊಳ್ಳುವುದಿರಲಿ, ತಮ್ಮ ದೇಹವನ್ನು ನೆಲದ ಮೇಲೆ ಎಳೆಯುವುದೂ ಇವುಗಳಿಗೆ ಪ್ರಯಾಸಕರ. ದೇಹದ ತೂಕವನ್ನು ಕಡಿಮೆಮಾಡಿಕೊಳ್ಳಲು ತಮ್ಮ ಜೀವಮಾನದ ಹೆಚ್ಚುಭಾಗವನ್ನು ಇವು ನೀರಿನಲ್ಲೇ ಕಳೆಯುತ್ತಿದ್ದವು. ಆಳವಾದ ನೀರಿಗೆ ಇಳಿದರೂ ಉದ್ದವಾದ ಮುಂಗಾಲುಗಳ ಮತ್ತು ಕತ್ತಿನ ನೆರವಿನಿಂದ ತಮ್ಮ ತಲೆಯನ್ನು ನೀರಿನ ಮೇಲೆ ಎತ್ತಿಟ್ಟುಕೊಳ್ಳುತ್ತಿದ್ದವು. ತಲೆಯ ಮೇಲ್ಭಾಗದಲ್ಲಿ ಒಂದು ಗುಮ್ಮಟದಂಥ ಪ್ರದೇಶವಿತ್ತು. ಅದರಲ್ಲಿ ನಾಸಿಕ ರಂಧ್ರಗಳಿದ್ದವು. ನೀರಿನಲ್ಲಿ ಅಡಗಿದ್ದರೂ ರಂಧ್ರಗಳ ನೆರವಿನಿಂದ ಉಸಿರಾಡಲು ಸಾಧ್ಯವಾಗುತ್ತಿತ್ತು. 87ಳಿ ಉದ್ದವಿದ್ದ ಡಿಪ್ಲೋಡೋಕಸುಗಳು ತಮ್ಮ ಇತರ ಸಂಬಂಧಿಗಳಿಗಿಂತ ಕೃಶ ಮತ್ತು ಹಗುರವಾಗಿದ್ದವು. ಈ ಪ್ರಾಣಿಯ ಮಿದುಳು ಬಲು ಕಿರಿದು. ಅದರ ಸೊಂಟಪಟ್ಟಿಯ ಭಾಗದಲ್ಲಿ ಕಾಲುಗಳಿಗೆ ಹೋಗುವ ಮಿದುಳುಬಳ್ಳಿಯ ನರಗಳು ಒಟ್ಟುಗೂಡಿ ಆ ಪ್ರಾಣಿಯ ಮಿದುಳಿಗಿಂತ ಅನೇಕ ಪಾಲು ದೊಡ್ಡದಾದ ನರಗಳ ವಸ್ತುವನ್ನು ನಿರ್ಮಿಸಿದ್ದವು. ಇವನ್ನು ಎರಡನೆಯ ಮಿದುಳು ಎಂದು ಕರೆಯಬಹುದು. ಇದಕ್ಕೆ ಜ್ಞಾನವಾಹಕ ಗ್ರಹಣಶಕ್ತಿ (ಸೆನ್ಸರಿ ಪರ್‍ಸೆಪ್ಷನ್) ಇರದಿದ್ದರೂ ಬಹುಶಃ ಇದು ಸ್ಥೂಲವಾದ ಹಿಂಗಾಲುಗಳ ಚಲನೆಗೆ ಸಹಾಯಕವಾಗಿದ್ದಿರಬಹುದು. ಸೌರೊಪೊಡ ದೈತ್ಯೋರಗಗಳ ಅಸ್ಥಿಪಂಜರದ ರಚನೆಯನ್ನು ಪ್ರಕೃತಿಯ ಒಂದು ಅದ್ಭುತ ನಿರ್ಮಾಣ ವಾಸ್ತುಶಿಲ್ಪ ಎಂದು ಪರಿಗಣಿಸಲಾಗಿದೆ. ಇಷ್ಟಾದರೂ ನೀರಿನಲ್ಲಿ ಆಸರೆ ಪಡೆದಿದ್ದರೆ ಇವು ಅಲ್ಲೋಸಾರ್ ಮತ್ತು ಟಿರಾನೋಸಾರುಗಳ ಕ್ರೌರ್ಯಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದವು. ಕೋಟ್ಯಂತರ ವರ್ಷಗಳ ಅನಂತರ ಭೂಮಿಯ ಮೇಲಿನ ನೀರು ಬತ್ತುತ್ತ ಬಂದಂತೆ ಇವುಗಳ ಜೀವನ ಕಷ್ಟವಾಗುತ್ತ ಬಂದು ಅವು ಭೂಮಿಯ ಮೇಲೆ ಜೀವಿಸಲಾರದೆ ಹೋದವು.

ಪಕ್ಷಿಸೊಂಟಪಟ್ಟಿಯ ಅರ್ನಿತಿಶ್ಚಿಯ ಗಣದ ದೈತ್ಯೋರಗಗಳು: ಸ್ಟೀಗೋಸಾರಸ್ ಅರ್ನಿತಿಶ್ಚಿಯ ಗಣದ ಉಪಗಣ. ಇದು ಸಸ್ಯಾಹಾರಿ ಮತ್ತು ಚತುಷ್ಪಾದಿ. ಬೆನ್ನಿನ ಮೇಲೆ ತಲೆಯಿಂದ ಬಾಲದವರೆಗೆ ಪದರ ಪದರವಾಗಿ ಎದ್ದುನಿಂತ ಒಂದು ಸಾಲು ಚಿಪ್ಪುಗಳು ಮತ್ತು ಬಾಲದ ಮೇಲೆ ಇದ್ದ ನಾಲ್ಕು ದೊಡ್ಡ ಸಲಾಕಿಗಳಂಥ ಮುಳ್ಳುಗಳು ಆತ್ಮಸಂರಕ್ಷಣೆಯ ಸಾಧನವಾಗಿದ್ದವು. ಅಂಕೈಲೋಸಾರಸಿನ 20 ಉದ್ದದ ದೇಹವನ್ನು ಸಂಪೂರ್ಣವಾಗಿ ರಕ್ಷಣಾಕವಚಗಳು ಮುಚ್ಚಿದ್ದವು. ಮುಳ್ಳುಗಳಿಂದ ಕೂಡಿದ ಬಲಿಷ್ಠವಾದ ಬಾಲ ಅದರ ಒಂದು ಪ್ರಬಲ ಆಯುಧವಾಗಿತ್ತು. ಕಾಂಪ್ಟೋಸಾರಸ್ ತಮ್ಮ ಪೂರ್ವಜರಾದ ಥೀಕೊಡಾಂಟಗಳಂತೆ ದ್ವಿಪಾದಿಗಳು. ಇವು ಅನಂತರ ಕಾಣಿಸಿಕೊಂಡ ಬಾತುಕೊಕ್ಕಿನ ಮೂತಿಯ (ಡಕ್‍ಬಿಲ್ಟ್ ಡೈನೋಸಾರ್ಸ್) ದೈತ್ಯೋರಗಗಳ ಪೂರ್ವಜಗಳು. 40 ಉದ್ದದ ಅನಾಟೊಸಾರಸ್ ಇಂಥ ಒಂದು ಬಾತುಕೊಕ್ಕಿನ ದೈತ್ಯೋರಗ. ಅದರ ಮುಸುಡು ಬಾತುಕೋಳಿಯ ಕೊಕ್ಕಿನಂತಿತ್ತು. ಪ್ರತಿಯೊಂದು ಸಾಲಿನಲ್ಲೂ ನೂರಾರು ಹಲ್ಲುಗಳಿದ್ದವು. ಬಹುಶಃ ಕಾಂಪ್ಟೋಸಾರಸಿನಿಂದ ವಿಕಸಿಸಿದ ಇಗ್ವಾನೋಡಾನ್ 25-30 ವರೆಗೆ ಬೆಳೆದ ದ್ವಿಪಾದಿ ಸಸ್ಯಾಹಾರಿ ದೈತ್ಯೋರಗ. ಮೊಟ್ಟಮೊದಲು ದೊರೆತ ಇದರ ಪಳೆಯುಳಿಕೆಗಳು ವಿಜ್ಞಾನಿಗಳಿಗೆ ದೈತ್ಯೋರಗಗಳ ಪೂರ್ಣರೂಪ ಗಾತ್ರಗಳನ್ನು ಕಲ್ಪಿಸಿಕೊಳ್ಳಲು ನೆರವಾದವು. ಇಂದು ಬದುಕಿರುವ ಇಗ್ವಾನ ಜಾತಿಯ ಹಲ್ಲಿಯ ಬೃಹತ್ ಸ್ವರೂಪ ಇದಾಗಿರಬೇಕು ಎಂಬ ತಪ್ಪು ತಿಳಿವಳಿಕೆಯ ಮೇಲೆ ಇದನ್ನು ಇಗ್ವಾನೊಡಾನ್ ಎಂದು ಕರೆಯಲಾಗಿತ್ತು. ಇದರ ಪಳೆಯುಳಿಕೆಗಳು ಮೊದಲು ದೊರೆತದ್ದು ಇಂಗ್ಲೆಂಡಿನಲ್ಲಿ. ಅನಂತರ 1878ರಲ್ಲಿ ಬೆಲ್ಜಿಯಂನ ಕಲ್ಲಿದ್ದಲ ಗಣಿಯಲ್ಲಿ 30 ಪೂರ್ಣಪಳೆಯುಳಿಕೆಗಳು ಸಿಕ್ಕಿವೆ. ಸಸ್ಯಾಹಾರಿಯಾದರೂ ಈ ದ್ವಿಪಾದಿಗೆ ಹರಿತವಾದ ಹೆಬ್ಬೆರಳಿನ ತುದಿಯಲ್ಲಿದ್ದ ಚೂಪಾದ ಮುಳ್ಳು ರಕ್ಷಣಾಯುಧವಾಗಿತ್ತು. ಕೊಂಬಿನ ದೈತ್ಯೋರಗಗಳಲ್ಲಿ ಇಂದಿನ ಘೇಂಡಾಮೃಗವನ್ನು (ಖಡ್ಗಮೃಗ, ರೈನೋಸಾರಸ್) ಹೋಲುತ್ತಿದ್ದ ಟ್ರೈಸೆರಟಾಪ್ಸ್ ಬಹಳ ಮುಖ್ಯವಾದುದು. ಉತ್ತರ ಅಮೆರಿಕದಲ್ಲಿ ಹೇರಳವಾಗಿತ್ತು. ಇದರ ತಲೆಯ ಅಗಲ 7ಗಳಷ್ಟು. ಆತ್ಮಸಂರಕ್ಷಣೆಗೆ ಸಾಧನವಾಗಿ ಮೂರು ಕೊಂಬುಗಳಿದ್ದವು. 3 ಉದ್ದದ ಎರಡು ಕೊಂಬುಗಳು ಎರಡು ಕಣ್ಣುಗಳ ಮೇಲೆ; ಮತ್ತೊಂದು ಸ್ವಲ್ಪ ಚಿಕ್ಕದು ಮೂಗಿನ ಮೇಲೆ. ಬಹುಶಃ ಅಲ್ಲೋಸಾರ್ಸ್ ಮತ್ತು ಟೈರಾನೋಸಾರಿನಂಥ ಭೀಕರ ಮಾಂಸಾಹಾರಿಗಳೊಡನೆ ಸೆಣಸಿ ಕಾದಾಡಿ ಕೆಲವು ವೇಳೆ ಜಯಶಾಲಿಯಾದ ದೈತ್ಯೋರಗವೆಂದರೆ ಟ್ರೈಸೆರಟಾಪ್ಸ್ ಎಂದು ಊಹಿಸಲಾಗಿದೆ.

ಥೀಕೋಡಾಂಟಿನ ಸಾಲ್ಟೋಪಸ್ ಎಂಬ ಜೀವಿಯ ವಿಷಯ ಈಗಾಗಲೇ ಹೇಳಿದೆ. ಅಂಥ ಕೆಲವು ಜೀವಿಗಳು ಬಹುಶಃ ವಾಯುಮಂಡಲವನ್ನು ಆಕ್ರಮಿಸಲು ತೊಡಗಿದವು. ಅವುಗಳಿಂದ ವಿಕಸಿಸಿದ ಗಣವನ್ನು ಟೀರೊಡ್ಯಾಕ್ಟೈಲ ಅಥವಾ ಪಕ್ಷಾಂಗುಲೇಯ ಎಂದು ಕರೆಯಲಾಗಿದೆ. ಇದು ಜೂರಾಸಿಕ್ ಮತ್ತು ಕ್ರಿಟೇಷಿಯಸ್ ಕಲ್ಪಗಳಲ್ಲಿ ಹೇರಳವಾಗಿತ್ತು. ಇದರ ಮುಂಗಾಲುಗಳು ಇಂದಿನ ಬಾವಲಿಗಳಿಗಿರುವಂತೆ ರೆಕ್ಕೆಗಳಾಗಿ ರೂಪಗೊಂಡಿತ್ತು. ಆದರೆ ಬಾಲ ಬಹಳ ಉದ್ದ. ತುದಿಯಲ್ಲಿ ಇದರ ಆಕಾರ ಮೀನಿನ ಈಜುರೆಕ್ಕೆಯಂತೆ. ಇದನ್ನು ಹಾರುವ ಪೆಡಂಭೂತ ಎಂದು ಕರೆಯಬಹುದು. ಇದು ಮಾಂಸಾಹಾರಿ ಪ್ರಾಣಿ. ಇದರಲ್ಲಿ ಮೊದಮೊದಲು ವಿಕಸಿಸಿದವು ಕೇವಲ ಗುಬ್ಬಚ್ಚಿಯಷ್ಟು ಚಿಕ್ಕದಾಗಿದ್ದವು. ಉದ್ದವಾದ ದವಡೆ, ಅದರ ತುಂಬ ಹಲ್ಲುಗಳು: ಇವು ನೋಡಲು ಅಸಹ್ಯವಾಗಿದ್ದವು. ಕ್ರಮೇಣ ಇವುಗಳ ಗಾತ್ರ ಇಂದಿನ ಪುಟ್ಟ ವಿಮಾನದಷ್ಟು ಬೆಳೆಯಿತು. ಅತಿ ದೊಡ್ಡದಾದ ಜೀವಿ ರೆಕ್ಕೆಗಳನ್ನು ಹರಡಿದಾಗ ಅದು ಸುಮಾರು 28 ಗಳಷ್ಟು ಅಗಲವಾಗಿ ವ್ಯಾಪಿಸುತ್ತಿತ್ತು. ರ್ಹಾಂಪೊರ್ಹಿಂಕಾಯ್ಡಿಯ ಎಂಬ ಜಾತಿಯ ರ್ಹಾಂಪೋರ್ಹಿಂಕಸ್ ಮತ್ತು ಡೈಮಾರೊಡಾನ್ ಎಂಬುವ ಹಾರುವ ಜಾತಿಗಳಿಗೆ ಉದ್ದನೆಯ ಬಾಲವಿತ್ತು; ಅದರ ತುದಿ ಮೀನಿನ ಈಜುರೆಕ್ಕೆಯಂತಿತ್ತು. ಟೀರೋಡ್ಯಕ್ಟೈಲಾಯ್ಡಿಯಾ ಎಂಬ ಜಾತಿಯ ಜೀವಿಗಳಲ್ಲಿ ಬಾಲ ಮೊಟಕು, ಅದೇ ಜಾತಿಯ ಟೀರೊಡ್ಯಕ್ಟೈಲಸ್ ಪ್ರಬೇಧದ ಉರಗಗಳಿಗೆ ಹಲ್ಲುಗಳು ಇರಲಿಲ್ಲ.

ಅಂದು ಭೂಮಿಯ ಮೇಲೆ ಬಾಳುತ್ತಿದ್ದ ಮಹಾಕ್ರೂರಿ ದೈತ್ಯೋರಗಗಳ ಉಪದ್ರವವನ್ನು ತಾಳಲಾರದೆ ಬಹುಶಃ ಕೆಲವು ಉರಗಗಳು ತಮ್ಮ ಪೂರ್ವಜರಂತೆ ಪುನಃ ನೀರಿಗೆ ಮರಳಿರಬಹುದು. ಇವನ್ನು ಮತ್ಸ್ಯೋರಗಗಳು ಎಂದು ಕರೆಯಬಹುದು. ಜಲಜೀವನಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ತಮ್ಮ ದೇಹವನ್ನು ಅಳವಡಿಸಿಕೊಂಡ ಇವನ್ನು ಎರಡು ಗಣಗಳಿಗೆ ಸೇರಿಸಲಾಗಿದೆ. ಅವು ಪ್ಲೀಸಿಯೋಸಾರಿಯ ಮತ್ತು ಇಕ್ತಿಯೋಸಾರಿಯ. ಈ ಎರಡು ಗಣಗಳ ಜೀವಿಗಳ ಕಪಾಲದಲ್ಲಿ ಪ್ರತಿಯೊಂದು ಪಾಶ್ರ್ವದಲ್ಲೂ ಸೈನಾಪ್ಸಿಡದಂತೆ ಒಂದೊಂದು ಬೃಹದ್ರಂಧ್ರವಿದ್ದರೂ, ಅದರ ಎಲುಬಿನ ಆಯಕಟ್ಟಿನಲ್ಲಿ ವ್ಯತ್ಯಾಸವಿದ್ದುದರಿಂದ ಅದನ್ನು ಸೈನಾಪ್ಸಿಡಕ್ಕೆ ಸೇರಿಸಲಾಗುವುದಿಲ್ಲ. ಈ ಕಾರಣದಿಂದ ಆ ಗಣದ ಉರಗಗಳನ್ನು ಪ್ಯಾರಾಪ್ಸಿಡ ಉರಗಗಳು ಎಂದು ಪರಿಗಣಿಸಲಾಗಿದೆ. ಇದೇ ಕಾರಣದ ಮೇಲೆ ನೆಲದ ಮೇಲೆ ವಾಸಿಸುತ್ತಿದ್ದ ಚಿಕ್ಕ ಹಲ್ಲಿಯಂಥ ದೇಹದ ಅರಿಯೋಸೆಲಿಸನ್ನು ಒಳಗೊಂಡ ಪ್ರೋಟೋಸಾರಿಯ ಗಣವನ್ನು ಪ್ಯಾರಾಪ್ಸಿಡ ಉಪವರ್ಗಕ್ಕೆ ಸೇರಿಸಲಾಗಿದೆ. ಪ್ಯಾರಾಪ್ಸಿಡಗಳು ಉರಗದ ಯಾವ ಶಾಖೆಯಿಂದ ವಿಕಸಿಸಿದವು ಎಂಬುದು ವಿವಾದಾಸ್ಪದ. ಬಹುಶಃ ಕಾಟಿಲೋಸಾರಿಯದಿಂದ ವಿಕಸಿಸಿದ ಡೈಆಪ್ಸಿಡ ಶಾಖೆಯಿಂದ ಆದಿಯಲ್ಲೇ ಕವಲಾಗಿ ಇವು ವಿಕಸಿಸಿರಬಹುದು. ಕಡಲವಾಸಿಗಳಾದ ಸ್ಪಿಸಿಯೋಸಾರಿಯ ಮತ್ತು ಇಕ್ತಿಯೋಸಾರಿಯ ಗಣಗಳ ಮತ್ಸ್ಯೋರಗಗಳ ವಂಶಜರು ಪ್ರೋಟೋಸಾರಿಯ ಗಣದ ಜೀವಿಗಳು ಎಂದೂ ಊಹಿಸಲಾಗಿದೆ. ಮತ್ಸ್ಯೋರಗಗಳಲ್ಲಿ ಕೆಲವು ದ್ವಿಚರಿಗಳಾಗಿದ್ದವು. ಅವನ್ನು ಸೌರಾಪ್ಪೆರಿಗಿಯ ಎಂಬ ಗಣಕ್ಕೆ ಸೇರಿಸಿದೆ. ಪ್ಲಿಸಿಯೋಸಾರಿಯ ಉಪವರ್ಗದ ಜೀವಿಗಳು ಕಡಲವಾಸಿಗಳು. ಅವುಗಳ ಆಮೆಯಂಥ ದೇಹಕ್ಕೆ ಉದ್ದವಾದ ಕತ್ತು ಮತ್ತು ದೇಹದ ಗಾತ್ರಕ್ಕೆ ಸ್ವಲ್ಪವೂ ಹೊಂದದ ಚಿಕ್ಕತಲೆ, ಮೊಟಕಾದ ಬಾಲಗಳಿದ್ದವು. ಕಾಲುಗಳು ಈಜಲು ಸಹಾಯಕವಾಗಿ ಜಲಪಾದಗಳಾಗಿ ರೂಪಾಂತರಗೊಂಡಿದ್ದವು. ಕೆಲವು ಜಾತಿಗಳು 40 ಗಳಷ್ಟು ಉದ್ದ ಬೆಳದಿದ್ದವು. ಇಕ್ತಿಯೋಸಾರಿಯ ಗಣದ ಮತ್ಸ್ಯೋರಗಗಳು ಜಲವಾಸಕ್ಕೆ ಇನ್ನಷ್ಟು ಚೆನ್ನಾಗಿ ಹೊಂದಿಕೊಂಡು ಟ್ರಯಾಸಿಕ್ ಕಲ್ಪದಿಂದ ಜೂರಾಸಿಕ್ ಕಲ್ಪದವರೆಗೆ ಬಾಳಿದವು. ಇವು ಮೀನನ್ನು ಹೋಲುತ್ತಿದ್ದವು. ಉದ್ದ 30'-40' ಗಳಷ್ಟು. ಇಂಗ್ಲೆಂಡ್ ದೇಶದ ಒಬ್ಬ ಬಾಲಕಿಗೆ ಇದರ ಒಂದು ಪಳೆಯುಳಿಕೆ 1811ರಲ್ಲಿ ಸಿಕ್ಕಿತು. ಇಂಥವು ಈಚೆಗೆ ಭೂಮಿಯ ಎಲ್ಲ ಭಾಗಗಳಲ್ಲೂ ದೊರೆತಿವೆ. ಈ ಕಾರಣದಿಂದಲೇ ಇವು ಆ ಯುಗದಲ್ಲಿ ಹೇರಳವಾಗಿ ಬಾಳಿರಬೇಕು ಎಂದು ಊಹಿಸಲಾಗಿದೆ.
ಹೀಗೆ ಭೂಮಿಯ ಮೇಲಿನ ದೈತ್ಯೋರಗಗಳು, ಸಮುದ್ರದ ಪೈಶಾಚಿಕ ಮತ್ಸ್ಯೋರಗಗಳು ಮತ್ತು ಖಗವಾಸಿ ಪೆಡಂಭೂತಗಳು(ಈ ಪ್ರಾಣಿಗಳಿಂದ ತುಂಬಿದ ಭೂಮಂಡಲ ಅತಿ ಭಯಂಕರವೂ ಅದ್ಭುತವೂ ಇದ್ದಿರಬೇಕು. ಆದರೆ 12 ಕೋಟಿ ವರ್ಷಗಳ ಕಾಲ ಸತತವಾಗಿ ನಿರಂಕುಶ ಪ್ರಭುಗಳಾಗಿ ಮೆರೆದ ಈ ದೈತ್ಯಜೀವಿಗಳು ಮುಂದೊಂದು ದಿವಸ ನಿಶ್ಯೇಷವಾದವು. ಇದಕ್ಕೆ ಕಾರಣಗಳು ಹಲವಾರು ಈ ವಿಷಯದ ಬಗ್ಗೆ ವಿಜ್ಞಾನಿಗಳು ಊಹಾಪೋಹಗಳನ್ನು ಮಾಡುತ್ತಲೇ ಇದ್ದಾರೆ. ವಾತಾವರಣದಲ್ಲಿ ಬದಲಾವಣೆಯಾಗುತ್ತ ಬಂತು. ಗಾಳಿ ತಂಪಾಗಿ ಶೀತಲಗಾಳಿ ಬೀಸಲು ಪ್ರಾರಂಭಿಸಿತು; ಕ್ರಮೇಣ ಜೌಗುಪ್ರದೇಶಗಳು ಬತ್ತುತ್ತ ಬಂದವು. ಅನೇಕ ಹೊಸವರ್ಗದ ಸಸ್ಯಗಳು ಕಾಣಿಸಿಕೊಂಡವು. ಶೀತರಕ್ತದ ಉರಗಗಳಲ್ಲಿ ಅನೇಕ ಪ್ರಬೇಧಗಳು ಅದರಲ್ಲೂ ದೈತ್ಯೋರಗ, ಮತ್ಸ್ಯೋರಗ ಮತ್ತು ಹಾರುವ ಪೆಡಂಭೂತಗಳು ಈ ಶೀತಳ ಹವೆಯನ್ನು ತಾಳಲಾರದೆ ಗತಿಸಿಹೋಗಿರಬಹುದು. ಸಮುದ್ರದ ಶೈತ್ಯವೂ ಹೆಚ್ಚಿ ಮತ್ಸ್ಯೋರಗಗಳು ಅವಸಾನಗೊಂಡವು. ಸಸ್ಯಾಹಾರಿ ದೈತ್ಯೋರಗಗಳಿಗೆ ಹೊಸಬಗೆಯ ಸಸ್ಯಾಹಾರ ಒಗ್ಗಲಿಲ್ಲ. ಹೀಗೆ ಉಂಟಾದ ಆಹಾರಭಾವದಿಂದ ಅವು ಮಡಿದಿರಬಹುದು. ಅದರ ಪರಿಣಾಮವಾಗಿ ಅವನ್ನು ತಿಂದು ಜೀವಿಸುತ್ತಿದ್ದ ಮಾಂಸಾಹಾರಿ ದೈತ್ಯೋರಗಗಳಿಗೂ ಆಹಾರದ ಕೊರತೆ ಪ್ರಾರಂಭವಾಯಿತು. ಇದರಿಂದ ಕ್ರಮೇಣ ಅವೂ ಅವಸಾನ ಹೊಂದಿರಬಹುದು ಎಂಬುದು ಒಂದು ವಾದ.

ಸ್ವೀಕಾರಾರ್ಹವಾದ ಇನ್ನೊಂದು ತರ್ಕಸರಣಿ ಇದೆ. ಈ ದೈತ್ಯಜೀವಿಗಳಿಗೆ ತಮ್ಮ ಭೂತಾಕಾರದ ಮೊಟ್ಟೆಗಳನ್ನು ಯಾವ ಮರೆಯಲ್ಲಾಗಲೀ ಅಥವಾ ರಕ್ಷಣೆಯಲ್ಲಾಗಲೀ ಇಡಲು ಸಾಧ್ಯವಾಗುತ್ತಿರಲಿಲ್ಲ. ನೆಲದ ಮೇಲೆಯೇ ಅವನ್ನು ಇಡುತ್ತಿದ್ದವು. ಚಿಕ್ಕ ಸರೀಸೃಪಗಳೂ ಮತ್ತು ಆ ವೇಳೆಗೆ ವಿಕಸಿಸುತ್ತಿದ್ದ ಆದಿ ಸ್ತನಿಗಳು ಈ ಮೊಟ್ಟೆಗಳನ್ನು ನಾಶಪಡಿಸಿರಬಹುದು. ಡಾಕ್ಟರ್ ಮೋರಿಯವರ ಕೌತುಕವಾದ ಊಹೆಯೊಂದಿದೆ. ಒಂದು ಬಗೆಯ ಅಸಾಧಾರಣವಾದ ಸಾಂಕ್ರಾಮಿಕ ಜಾಡ್ಯಕ್ಕೆ ಈ ದೈತ್ಯೋರಗಗಳು ಬಲಿಯಾಗಿ ನಿಶ್ಯೇಷವಾಗಿ ಅಳಿದವು. ಸಾಂಕ್ರಾಮಿಕ ರೋಗಗಳನ್ನುಂಟುಮಾಡುವ ಜೀವಾಣುಗಳು ಪ್ರಾರಂಭದಲ್ಲಿ ಸ್ವತಂತ್ರ ಜೀವಿಗಳಾಗಿದ್ದು, ಉರಗಗಳು ಉನ್ನತಸ್ಥಿತಿಗೆ ತಲಪುವ ವೇಳೆಗೆ ಬಹುಶಃ ಪರತಂತ್ರಜೀವಿಗಳಾಗಿ ಪರಿಣಮಿಸಿ ಈ ದೈತ್ಯೋರಗಗಳ ವಿಪತ್ತಿಗೆ ಕಾರಣಗಳಾಗಿರಬಹುದು ಎಂಬುದು ಅದರ ಸಾರ. ಇದು ನಿಜವಾದ ಪಕ್ಷದಲ್ಲಿ, ಇತರ ಉರಗ ಮತ್ತು ಅನೇಕ ಇತರ ವರ್ಗದ ಪ್ರಾಣಿಗಳು ಈ ಆಪತ್ತಿನಿಂದ ಹೇಗೆ ಪಾರಾದವು ಎಂಬ ಪ್ರಶ್ನೆ ಏಳುತ್ತದೆ. ಮೇಲೆ ಹೇಳಿದ ವಿಪತ್ತುಗಳು ಇದ್ದರೂ ಅವನ್ನು ಎದುರಿಸಿ ಉಳಿದಿರುವ ಸಣ್ಣ ಸಣ್ಣ ಉರಗಗಳನ್ನು ಗಮನಿಸಿದರೆ ಆ ದೈತ್ಯೋರಗಗಳ ವಿನಾಶಕ್ಕೆ ಕಾರಣ ಇಂಥಾದ್ದೇ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಬಹುಶಃ ಮೇಲೆ ಹೇಳಿದ ಎಲ್ಲ ಊಹೆಗಳ ಮೊತ್ತ ಇದ್ದರೂ ಇರಬಹುದು.

ದೈತ್ಯೋರಗಗಳ ವಿಷಯವಾಗಿ ಊಹಾಪೋಹಗಳಲ್ಲದೇ ಕೆಲವು ತಪ್ಪು ಕಲ್ಪನೆಗಳೂ ಇರುವುದುಂಟು. ಮೊದಲನೆಯದಾಗಿ ದೈತ್ಯೋರಗ ಒಂದು ಬೃಹತ್ ಸ್ವರೂಪದ ಸರೀಸೃಪ ಮಾತ್ರ ಎಂದು. ಕೇವಲ ಕೋಳಿಮರಿಯಷ್ಟು ಚಿಕ್ಕದಾದ ದೈತ್ಯೋರಗವೂ ಕೂಡ ಇದ್ದದಲ್ಲದೇ ಅನೇಕ ದೈತ್ಯೋರಗಗಳ ಉದ್ದ 6'-8' ವರೆಗೆ ಮಾತ್ರ ಇತ್ತು. ಎರಡನೆಯ ತಪ್ಪು ಕೆಲವು ಚಿತ್ರಕಾರರ ಕಾಲ್ಪನಿಕ ಚಿತ್ರಗಳಿಂದ ಮೂಡಿದೆ. ಆದಿಮಾನವ ದೈತ್ಯೋರಗಗಳ ಎದುರು ಹೋರಾಡುತ್ತಿರುವ ಚಿತ್ರಗಳು ಕೆಲವಿವೆ. ಏಳು ಕೋಟಿ ವರ್ಷಗಳ ಹಿಂದೆಯೇ ದೈತ್ಯೋರಗಗಳು ಕಣ್ಮರೆಯಾದವು. ಆ ವೇಳೆಗೆ ಮಾನವ ಇನ್ನೂ ವಿಕಸಿಸಿಯೇ ಇರಲಿಲ್ಲ. ಮಾನವನ ಹತ್ತಿರದ ಪೂರ್ವಜರು ಕೇವಲ 10 ಲಕ್ಷ ವರ್ಷಗಳ ಹಿಂದೆ ಇದ್ದಿರಬಹುದು ಎಂದು ಊಹಿಸಲಾಗಿದೆ.

ಇಂದು ಉಳಿದಿರುವ ಸರೀಸೃಪಗಳು: ಇವನ್ನು ನಾಲ್ಕು ಮುಖ್ಯ ಗಣಗಳಿಗೆ ಸೇರಿಸಲಾಗಿದೆ-1. ಕ್ರಾಕಡಿಲಿಯ 2. ರ್ಹಿಂಕೋಕಿಫೇಲಿಯ, 3. ಸ್ದ್ವಮಾಟ, 4. ಕೀಲೋನಿಯ.

ಕ್ರಾಕಡಿಲಿಯ ಗಣ: ಡೈಆಪ್ಸಿಡಗಳ ಆರ್ಕಿಸೌರಿಯ ಉಪವರ್ಗಕ್ಕೆ ಸೇರಿದೆ. ಉದಾ: ನೆಗಳೆಗಳು, ಮೊಸಳೆಗಳು. ಕ್ರಾಕಡಿಲಿಯದ ಪಳಿಯುಳಿಕಗಳು ಮಧ್ಯಜೀವಯುಗದ ಜೂರಾಸಿಕ್ ಮತ್ತು ಕ್ರಿಟೇಷಿಯಸ್ ಕಲ್ಪಗಳ ಶಿಲೆಗಳಲ್ಲಿ ಸಿಕ್ಕಿವೆ. ಇವು ಜೂರಾಸಿಕ್ ಕಲ್ಪದ ಆರಂಭದಲ್ಲಿ ವಿಕಸಿಸಿ ಇಂದಿಗೂ ಜೀವಿಸಿವೆ. ಸುಮಾರು 16 ಕೋಟಿ ವರ್ಷಗಳಿಂದಲೂ ಇವುಗಳ ದೇಹರಚನೆಯಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ ಎಂದು ತಜ್ಞರ ಅಭಿಪ್ರಾಯ. ಉಷ್ಣವಲಯದಲ್ಲಿ ಇವು ಸಾಮಾನ್ಯ. ಶೀತಳ ನೀರಿರುವಲ್ಲಿ ಕಾಣಿಸವು. ಅನಾದಿಕಾಲದಲ್ಲಿ ಮೊಸಳೆಗಳು ಪ್ರಪಂಚದ ಎಲ್ಲ ಭಾಗಗಳಲ್ಲೂ ಹರಡಿದ್ದವು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ ಇದೆ. ಇಂಗ್ಲೆಂಡ್ ದೇಶದಲ್ಲಿ ಈಗ ಮೊಸಳೆಗಳು ಕಾಣಬರದಿದ್ದರೂ ಹಿಂದೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಅದರ ಪಳಯುಳಿಕೆಗಳು ಸಿಕ್ಕಿವೆ. ಆಫ್ರಿಕ, ಬ್ರೆಜಿûಲ್ ಮತ್ತು ದಕ್ಷಿಣ ಏಷ್ಯದ ನದಿ, ಜೌಗುಪ್ರದೇಶಗಳಲ್ಲೂ ಅವು ಸಮೃದ್ದಿಯಾಗಿ ಬಾಳಿವೆ. ಅದರಲ್ಲೂ ಆಫ್ರಿಕದ ನದಿಗಳಲ್ಲಿಯೂ, ದಕ್ಷಿಣ ಅಮೆರಿಕದ ಅಮೆಜಾóನ್ ನದಿಗಳಲ್ಲಿಯೂ ಮೊಸಳೆಗಳ ಹಿಂಡುಗಳನ್ನು ವಿಫುಲವಾಗಿ ಕಾಣಬಹುದು. ಸಮಶೀತೋಷ್ಣವಲಯದ ಅನೇಕ ಪ್ರದೇಶಗಳಲ್ಲಿಯೂ ಚೀನ, ಆಸ್ಟ್ರೇಲಿಯ ಮತ್ತು ಮಧ್ಯ ಅಮೆರಿಕಗಳಲ್ಲೂ ಇವು ಸಾಕಷ್ಟು ಸಂಖ್ಯೆಯಲ್ಲಿವೆ.

ಮೊಸಳೆಗಳಲ್ಲಿ ನಾಲ್ಕು ಪ್ರಬೇಧಗಳಿವೆ: 1. ಉತ್ತರ ಅಮೆರಿಕ ಮತ್ತು ವೆಸ್ಟಿಂಡೀಸಿನ ಕೈಮನ್, 2. ಉತ್ತರ ಅಮೆರಿಕದ ಮತ್ತು ಚೀನದ ನದಿಗಳಲ್ಲಿರುವ ಅಲಿಗೇಟರ್ ಮತ್ತು ಮೊಸಳೆಗಳು, 3. ಭಾರತ, ಆಸ್ಟ್ರೇಲಿಯ ಮತ್ತು ಆಫ್ರಿಕಗಳ ಮೊಸಳೆ (ಕ್ರೋಕೊಸ್ಟ್ರೆಲ್ಸ). 4. ಭಾರತದ ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳಲ್ಲಿ ವಾಸಿಸುವ ಗೇವಿಯಲ್ ಅಥವ ಘಾರಿಯಲ್ಲುಗಳು. ಮೊಸಳೆಗಳ ತಲೆಯ ಆಕಾರದಲ್ಲಿ ಭಿನ್ನತೆ ಇದೆ. ಗೇವಿಯಲ್ ಪ್ರಬೇಧದ ಕೊಕ್ಕಿನಂತಿರುವ ಮುಸುಡಿಯಿಂದ ಹಿಡಿದು ಮೊಸಳೆಗಳ ಗುಂಡಾದ ಮೊಟಕಿನ ಮುಸುಡಿನವರೆಗೆ ಈ ಭಿನ್ನತೆಯನ್ನು ಮಜಲು ಮಜಲಾಗಿ ಕಾಣಬಹುದು. ಗೇವಿಯಲ್ಲುಗಳಿಗೆ ಮುಸುಡು ಪಕ್ಷಿಯ ಕೊಕ್ಕಿನ ಆಕಾರದಲ್ಲಿದೆ. ಇದು ಬಲು ಉದ್ದ. ಮೊಸಳೆಗಳ ತಲೆ ತ್ರಿಕೋನಕಾರವಾಗಿದೆ ಮುಸುಡಿನ ಮುಂಭಾಗ ಚೂಪು, ಕೈಮನ್ನುಗಳ ತಲೆ ಹೆಚ್ಚು ಗುಂಡಾಕಾರವಾಗಿದೆ. ಮುಸುಡು ಮೊಂಡಾದ ತ್ರಿಕೋನಾಕರದಲ್ಲಿದೆ. ಮೊಸಳೆಗಳಲ್ಲಿ ಎರಡು ಉಪಪ್ರಬೇಧಗಳಿವೆ; ಒಂದರ ವಾಸ ಅಮೆರಿಕದ ನದಿಗಳಲ್ಲಿ, ಇನ್ನೊಂದರದು ಚೀನಾದೇಶದ ನದಿಗಳಲ್ಲಿ. ಭಾರತ ದೇಶದಲ್ಲಿರುವ ಮೊಸಳೆಗಳ ಪ್ರಬೇಧಗಳು ಕ್ರಕಡೈಲಸ್ ಪೊರೋಸಸ್ ಮತ್ತು ಕ್ರಕಡೈಲಸ್ ಪಲೂಸ್ಟ್ರಿಸ್. ಇವು ನದೀಮುಖಜಗಳಲ್ಲಿನ ಜೌಗುಪ್ರದೇಶಗಳಲ್ಲಿವೆ. ಗೇವಿಯಲ್ ಪ್ರಬೇಧದ ಗೆವಿಯಲಾಸ್ ಗ್ಯಾಂಜಿಟಿಕಸ್ ಎಂಬುದು ಗಂಗಾ ಮತ್ತು ಬ್ರಹ್ಮಪುತ್ರಾನದಿಗಳಲ್ಲಿವೆ. ಉಪ್ಪಿನ ಜೌಗುಪ್ರದೇಶಗಳಲ್ಲಿ ವಾಸಿಸುವ ಮೊಸಳೆಗಳನ್ನು ಅಳಿವೆ ಮೊಸಳೆಗಳು (ಯೂಸ್ಟರೀನ್ ಕ್ರೋಕೊಡೈಲ್ಸ) ಎಂದು ಕರೆಯುವುದು ವಾಡಿಕೆ. ಭಾರತ, ಸಿಲೋನ್, ದಕ್ಷಿಣ ಚೀನ ಮತ್ತು ಉತ್ತರ ಆಸ್ಟ್ರೇಲಿಯ ದೇಶಗಳಲ್ಲಿ ಇವು ವ್ಯಾಪಿಸಿವೆ. ಇವು ಅತಿಕ್ರೂರಿ ಮೊಸಳೆಗಳು.

ಕೈಮನ್ ಮತ್ತು ಮೊಸಳೆಗಳು ಒಂದನ್ನೊಂದು ಬಹುವಾಗಿ ಹೋಲುತ್ತವೆ. ಅವುಗಳ ಸ್ವಭಾವವೂ ಅಷ್ಟೆ. ಅವೆರಡೂ ಮಾಂಸಾಹಾರಿ ಪ್ರಾಣಿಗಳು. ನದಿಯ ನೀರು ಬತ್ತಿದಂತೆ ಸಮುದ್ರಕ್ಕೆ ವಲಸೆ ಹೋಗುವ ಈ ಪ್ರಾಣಿಗಳು ನೀರು ಹೆಚ್ಚು ಬತ್ತದೆ ಇರುವ ಸಮಯಗಳಲ್ಲಿ ನೀರಿನ ತಳಭಾಗದ ಮಣ್ಣಿನಲ್ಲಿಯೇ ಹುದುಗಿಕೊಂಡಿದ್ದು ಪುನಃ ನೀರಿನ ಏರಿಕೆಗಾಗಿ ಕಾಯಬಲ್ಲವು. ಮೊಸಳೆಗಳಿಗೆ ಹಿಂಗಾಲುಗಳಲ್ಲಿ ಅರ್ಧ ಜಾಲಪಾದವಿದ್ದರೆ, ನೆಗಳೆಗಳಿಗೆ ಪೂರ್ಣ ಜಾಲಪಾದವಿದೆ. ಮೊಸಳೆಗಳಿಗೆ ಉಪ್ಪಿನ ಜೌಗುಪ್ರದೇಶಗಳೇ ಹೆಚ್ಚು ಇಷ್ಟ. ಕೆಲವು ವೇಳೆ ಸಮುದ್ರಕ್ಕೂ ಈಜಿಕೊಂಡು ಹೋಗುತ್ತವೆ. ಆದರೆ ನೆಗಳೆಗಳಿಗೆ ಸಿಹಿನೀರೇ ಹೆಚ್ಚು ಪ್ರಿಯವಾದದ್ದು. ಸಾಮಾನ್ಯವಾಗಿ ನೆಗಳೆಗಳು ನಿರುಪದ್ರವಿಗಳು. ಭಾರತದ ಕ್ರಕಡೈಲಸ್ ಪೊರೊಸಸ್ ಮತ್ತು ಮಲೇಶಿಯ, ಆಫ್ರಿಕಗಳ ಕ್ರಕಡೈಲಸ್ ಕ್ರೋಟಕಸ್ ಇವುಗಳಿಂದ ಮನುಷ್ಯನ ಪ್ರಾಣಕ್ಕೆ ಆಗುತ್ತಿರುವ ಹಾನಿ ಅಪಾರವಾದ್ದದ್ದು. ಆದ್ದರಿಂದ ಇವನ್ನು ನರಭಕ್ಷಕಗಳು ಎಂದು ಕರೆಯಲ್ಪಟ್ಟಿವೆ. ನೀರನ್ನು ಕುಡಿಯಲು ಬರುವ ಕಾಡುಕೋಣ, ದನಕರುಗಳು, ಕುದುರೆಗಳು ಮತ್ತು ಸ್ನಾನಕ್ಕಾಗಿ ಇಳಿಯುವ ಜನರು ಈ ನರಭಕ್ಷಕಗಳಿಗೆ ಬಲಿಯಾಗಿರುವ ಸಂದರ್ಭಗಳು ಸಾವಿರಾರು. ಗೇವಿಯಲ್, ನೆಗಳೆ, ಮೊಸಳೆ ಇವುಗಳ ಕೆಲವು ಪ್ರಬೇಧಗಳು ನೀರಿನಲ್ಲಿರುವ ಮೀನು, ಕಡಲಾಮೆ, ಹಕ್ಕಿ, ಏಡಿ ಮುಂತಾದವನ್ನು ತಿಂದು ಜೀವಿಸುತ್ತವೆ. ನೀರಿನಲ್ಲಿದ್ದಾಗ ಇವು ಅತಿ ಭಯಂಕರಿಗಳು, ಆದರೆ ನೆಲದ ಮೇಲೆ ಬಿದ್ದಾಗ ಏನೂ ಕೈಲಾಗದವು.

ದೊಡ್ಡ ನದೀಮುಖಜಗಳ ಜೌಗುಪ್ರದೇಶಗಳಲ್ಲಿ ವಾಸಿಸುವ ಮೊಸಳೆಗಳು (ಅಳಿವೆ ಮೊಸಳೆಗಳು) ಬಹಳ ಹಳೆಯ ಬುಡಕಟ್ಟಿಗೆ ಸೇರಿದಂಥವು. ಇವು ಸುಮಾರು 30 ಉದ್ದ ಬೆಳೆಯಬಲ್ಲವು. 20 ಉದ್ದದ ಗೇವಿಯಲ್ ಜಾತಿ ಮೊಸಳೆಗಳ ಪೂರ್ವಜರು ಸುಮರು 60 ಉದ್ದ ಬೆಳೆಯುತ್ತಿದ್ದವೆಂದು ಊಹಿಸಲಾಗಿದೆ. ಅವುಗಳ ನಾಲ್ಕು ಕಾಲುಗಳು ಭೂಮಿಯ ಮೇಲೆ ಮತ್ತು ನೀರಿನ ತಳದಲ್ಲಿ ನಡೆಯಲು ಸಹಕಾರಿಯಾಗಿವೆ. ಆದರೆ ನೀರಿನಲ್ಲಿ ಈಜಲು ಸಹಾಯಕವಾಗಿಲ್ಲ. ಈಜುವಾಗ ಕಾಲುಗಳನ್ನು ದೇಹದ ಪಕ್ಕಕ್ಕೆ ಒತ್ತಿಡುತ್ತವೆ. ಜಾಲಪಾದವಿರುವ ಹಿಂಗಾಲುಗಳು ಮತ್ತು ಬಲಿಷ್ಠವಾದ ದೊಡ್ಡ ಬಾಲ ಈ ಪ್ರಾಣಿಗೆ ನೀರಿನಲ್ಲಿ ಸಮತೋಲದಿಂದ ನಿಧಾನವಾಗಿ ಚಲಿಸಲು ಸಹಕಾರಿಗಳು. ಬೇರೆ ಪ್ರಾಣಿಗಳನ್ನು ಬಡಿದು ನುಚ್ಚು ನೂರು ಮಾಡಲು ಬಾಲವನ್ನು ಖಡ್ಗಯುದ್ಧದಂತೆ ಉಪಯೋಗಿಸಿಕೊಳ್ಳುವುದಿದೆ. ಇದರ ತಲೆ ಸದೃಢವಾದ ಎಲುಬುಗಳಿಂದ ಕೂಡಿದೆ. ಆದರೂ ಮಿದುಳಿನ ಗಾತ್ರ ದೇಹದ ಗಾತ್ರದೊಡನೆ ಹೋಲಿಸುವಾಗ ಬಲು ಚಿಕ್ಕದು. ಎಲುಬು ಫಲಕಗಳ ಕವಚ ಈ ಪ್ರಾಣಿಗಳ ವಿಶೇಷ ಲಕ್ಷಣ. ಸಾಮಾನ್ಯ ಆಯುಧಗಳು ಕವಚವನ್ನು ಬೇಧಿಸಿ ದೇಹವನ್ನು ನಾಟಲಾರವು. ಅದರ ಕತ್ತಿನ ಕಶೇರುಮಣಿಗಳು ಭದ್ರವಾಗಿ ಜೋಡಿಸಿಕೊಂಡಿರುವುದರಿಂದ ಮೊಸಳೆಗೆ ಮನುಷ್ಯರೂ ಪ್ರಾಣಿಗಳೂ ಅದರ ಈ ದೌರ್ಬಲ್ಯವನ್ನು ತಮ್ಮ ಆತ್ಮರಕ್ಷಣೆಗೋಸ್ಕರ ಚೆನ್ನಾಗಿ ಬಳಸಿಕೊಳ್ಳುವುದಿದೆ. ಮೊಸಳೆಯ ಎದುರಿನಿಂದ ಫಕ್ಕನೆ ಮಗ್ಗುಲಿಗೆ ತಿರುಗುವುದೊಂದೇ ಕ್ಷಿಪ್ರ ಉಪಾಯ. ಮೊಸಳೆಗಿರುವ ಅತಿ ಸಾಮಥ್ರ್ಯದ ಎರಡು ದವಡೆಗಳು. ಅವುಗಳ ತುಂಬ ಇರುವ ಎರಡು ಸಾಲು ಬಲವಾದ ಮತ್ತು ಚೂಪಾದ ಹಲ್ಲುಗಳು ಇವು-ಇದರ ಮುಸುಡನ್ನು ಅತಿ ಭಯಾನಕವಾದ ಶಸ್ತ್ರಾಗಾರವನ್ನಾಗಿ ಮಾಡಿವೆ. ಇದರ ಬಾಯಿಗೆ ಸಿಕ್ಕಿದ ಪ್ರಾಣಿ ಇಕ್ಕುಳದಲ್ಲಿ ಸಿಕ್ಕಿಕೊಂಡಂತೆಯೇ ಸರಿ. ಕಣ್ಣುಗಳು ಮತ್ತು ನಾಸಿಕ ರಂಧ್ರಗಳು ತಲೆಯ ಒಂದು ಉಬ್ಬಿದ ಭಾಗದಲ್ಲಿವೆ. ಪ್ರತಿಯೊಂದು ಕಣ್ಣಿನ ಹಿಂದೆಯೂ ಕಿವಿಯ ರಂಧ್ರವಿದೆ. ಇದನ್ನು ಮುಚ್ಚಿತೆರೆಯಬಲ್ಲ ಎಲುಬಿನ ಕವಾಟವಿದೆ. ನಾಸಿಕರಂಧ್ರಗಳಿಗೂ ಕವಾಟದ ವ್ಯವಸ್ಥೆಯಿದೆ. ಒಳನಾಸಿಕ ರಂಧ್ರಗಳು ಗಂಟಲಿನ ಮೇಲ್ಭಾಗದಲ್ಲಿವೆ. ಮೊಸಳೆ ನೀರಿನಲ್ಲಿ ಮುಳುಗಿದಾಗ ನಾಸಿಕ ರಂಧ್ರಗಳು ಸ್ವಲ್ಪ ನೀರಿನ ಮೇಲ್ಮಟ್ಟದಲ್ಲಿರುತ್ತವೆ. ಆಗ ಶ್ವಾಸರಂಧ್ರದ ಭಾಗ(ಗ್ಲಾಟಿಸ್) ಮುಂದಕ್ಕೆ ಚಾಚಿ ಒಳಗಿನ ನಾಸಿಕರಂಧ್ರಕ್ಕೆ ಅಂಟಿಕೊಳ್ಳುತ್ತದೆ. ಇದರಿಂದ ಹೊರಗಿನಿಂದ ಗಾಳಿ ಸತತವಾಗಿ ಶ್ವಾಸಕೋಶಗಳೊಳಗೆ ಹೋಗಲು ಸಹಾಯಕವಾಗುವುದು. ಆ ಕಾರಣಗಳಿಂದಲೇ ನೀರಿನಲ್ಲಿ ದೇಹ ಮುಳುಗಿದ್ದಾಗಲೂ ದೊಡ್ಡ ಪ್ರಾಣಿಗಳನ್ನು ಬಾಯಲ್ಲಿ ಹಿಡಿದಿರುವಾಗಲೂ ಉಸಿರಾಟ ಅವಿರತವಾಗಿ ಸಾಗುವುದು. ನೀರಿನ ಮೇಲೆ ತಲೆಯಿಟ್ಟಾಗ ಮಾತ್ರ ನಾಸಿಕರಂಧ್ರಗಳು ತೆರೆಯುತ್ತವೆ. ನೀರಿನಲ್ಲಿ ಮುಳುಗಿದ್ದರೂ ತೆರೆದ ಬಾಯಿಯ ಮೂಲಕ ನೀರು ನುಗ್ಗಲು ಅವಕಾಶವಿಲ್ಲ. ಸದಾ ನೀರಿನಲ್ಲಿ ಮುಳುಗಿಕೊಂಡೇ ಮೊಸಳೆ ಜೀವಿಸಿರಲಾರದು. ಕೆಲವು ವೇಳೆ ಅದು ನೀರಿನಲ್ಲಿ ಅಡಗಿರಬಹುದು. ಆದರೆ ಹೆಚ್ಚು ವೇಳೆಯನ್ನು ಬಂಡೆಗಳು ಮತ್ತು ದಡಗಳ ಮೇಲೆ ಕಳೆಯುತ್ತದೆ. ಬಿಸಿಲಿನ ಅಲ್ಪ ಶಾಖ ಅದಕ್ಕೆ ಬಹಳ ಹಿತಕರ. 

ಮೊಸಳೆಯ ಜಠರದ ಒಳಭಾಗ ಬಲವಾದ ಮಾಂಸಖಂಡಗಳಿಂದ ರಚನೆಗೊಂಡಿದೆ. ಇದಲ್ಲದೆ ಸಾಮಾನ್ಯವಾಗಿ ಈ ಭಾಗದಲ್ಲಿ ಒಂದು ಅಂಗುಲದಷ್ಟು ದಪ್ಪದ ಹಲವಾರು ಕಲ್ಲುಗಳೂ ಇವೆ. ಹೃದಯದಲ್ಲಿ ಹೃತ್ಯಕ್ಷಿ ಪೂರ್ಣವಾಗಿ ಎಡ ಮತ್ತು ಬಲಭಾಗಗಳಾಗಿ ವಿಭಾಗವಾಗಿದೆ. ಇದು ಶುದ್ಧ ಮತ್ತು ಅಶುದ್ದ ರಕ್ತಗಳನ್ನು ಬೇರ್ಪಡಿಸಲು ಸಹಕಾರಿ. ಆದರೂ ಪ್ರತಿಯೊಂದು ಹೃತ್ಯುಕ್ಷಿಯಿಂದ ಹೊರಡುವ ಒಂದೊಂದು ಅಯೋರ್ಟ ರಕ್ತನಾಳ(ಮಹಾ ಅಪಧಮನಿಗಳು-ಆರ್ಟರೀಸ್) ಹೃದಯದ ಹಿಂಭಾಗದಲ್ಲಿ ಒಂದುಗೂಡಿ ಊಧ್ರ್ವ ಅಯೋರ್ಟ ರಕ್ತನಾಳಗಳಾಗುವುದರಿಂದ ಶುದ್ದ ಮತ್ತು ಅಶುದ್ಧ ರಕ್ತಗಳು ಬೆರೆತು ದೇಹದ ಮುಂಡ ಭಾಗಕ್ಕೆ ಮಿಶ್ರ ರಕ್ತ ಹರಿಯುತ್ತದೆ. ಬಲ ಆಯೋರ್ಟದಲ್ಲಿ ಶುದ್ಧ ರಕ್ತವೂ ಎಡ ಆಯೋರ್ಟದಲ್ಲಿ ಅಶುದ್ಧ ರಕ್ತವೂ ಹರಿಯುತ್ತದೆ. ಬಲ ಅಯೋರ್ಟ ನಾಳದಿಂದ ಅದರ ಪ್ರಾರಂಭದಲ್ಲಿ ತಲೆಯ ಭಾಗಕ್ಕೆ ಕವಲುಗಳು ಹೊರಡುವುದರಿಂದ ಶುದ್ಧರಕ್ತ ತಲೆಯಭಾಗಕ್ಕೆ ಹರಿಯುತ್ತದೆ. ಶುದ್ಧರಕ್ತ ದೇಹದ ವಿವಿಧ ಭಾಗಗಳಿಗೂ ಅಶುದ್ಧರಕ್ತ ಶುದ್ಧಿಯಾಗಲು ಶ್ವಾಸಕೋಶಗಳಿಗೂ ಹರಿಯುವಂತೆ ಪ್ರಕೃತಿ ನಡೆಸಿದ ಪ್ರಯೋಗವೆಂದು ಸ್ಪಷ್ಟಪಡಿಸಬಹುದು. ಮುಂದೆ ವಿಕಸಿಸಿದ ಪಕ್ಷಿಗಳು ಮತ್ತು ಸ್ತನಿಗಳಲ್ಲಿ ಈ ಪ್ರಯತ್ನ ಸಫಲವಾಗಿರುವುದನ್ನು ಕಾಣಬಹುದು. ಮೊಸಳೆಯ ಪ್ರತಿಯೊಂದು ಶ್ವಾಸಕೋಶವೂ ಸ್ತನಿಗಳಲ್ಲಿರುವಂತೆ ಎರಡು ಪ್ಲೂರಾ ಪೊರೆಗಳಿಂದ ಆವರಿಸಲ್ಪಟ್ಟಿದೆ. ಕೆಳದವಡೆಯ ಅಂಚಿನಲ್ಲಿ ಮತ್ತು ಕ್ಲೊಯಕ ರಂಧ್ರದ ಅಕ್ಕಪಕ್ಕಗಳಲ್ಲಿ ಚರ್ಮದ ಗ್ರಂಥಿಗಳಿವೆ. ಇವು ಹೊರಚೆಲ್ಲುವ ದ್ರವದ ವಾಸನೆ ಕಸ್ತೂರಿಯಂತೆ. ಸಂತಾನೋತ್ಪತ್ತಿಯ ಕಾಲದಲ್ಲಿ ಇದರ ಉತ್ಪತ್ತಿ ಹೆಚ್ಚು. ಇತರ ಪ್ರಾಣಿಗಳನ್ನು ಬೇಟೆಯಾಡುವಾಗಲೂ ಈ ದ್ರವ ಹೆಚ್ಚು ಉತ್ಪತ್ತಿಯಾಗುವುದು ಕಂಡುಬಂದಿದೆ. 

ಮೊಸಳೆಗಳು ಅಂಡಜಗಳು ಒಂದು ಬಾರಿಗೆ 20-100 ಮೊಟ್ಟೆಗಳನ್ನಿಡುವುವು. ಬೇಸಿಗೆ ಸಮೀಪಿಸಿದಂತೆ ಕೆಲವು ಜಾತಿಯ ಮೊಸಳೆಗಳು ನೀರಿನ ತಳದ ಮರಳಿನಲ್ಲಿ ಗುಣಿಗಳನ್ನು ತೋಡಿ ಅಲ್ಲಿ ಮೊಟ್ಟೆಗಳನ್ನಿಟ್ಟು ಅನಂತರ ಮರಳು, ಸೊಪ್ಪು ಸೌದೆಗಳಿಂದ ಗುಣಿಗಳನ್ನು ಮುಚ್ಚುತ್ತವೆ. ಇದರಿಂದ ಮೊಟ್ಟೆಗಳ ಬೆಳೆವಣಿಗೆಗೆ ಬೇಕಾದ ಶಾಖ ದೊರೆಯುವುದು. ಹೆಣ್ಣು ಮೊಸಳೆ ಆ ಜಾಗವನ್ನು ಆಗಿಂದಾಗ್ಗೆ ಕಣ್ಣಿನಲ್ಲಿ ಕಣ್ಣಿಟ್ಟು ಕಾಯುವುದಲ್ಲದೆ ಕೆಲವು ವೇಳೆ ಮೊಟ್ಟೆಗಳು ಒಡೆದು ಮರಿಗಳಾಗುವರೆಗೂ ಅಲ್ಲಿ ಅಜ್ಞಾತವಾಸ ಸಹ ಮಾಡಬಲ್ಲದು. ಎರಡು ತಿಂಗಳುಗಳ ಅವಧಿಯಲ್ಲಿ ಮೊಟ್ಟೆಗಳು ಬಲಿತು ಒಳಗಿರುವ ಮರಿಗಳು ಧ್ವನಿಗೈಯುವುವೆಂದೂ ತಾಯಿ ಮೊಸಳೆ ಬಹುಶಃ ಅ ಧ್ವನಿಯನ್ನು ಕೇಳಿ ಗುಣಿಗಳ ಮೇಲಿನ ಮುಚ್ಚಿಕೆಗಳನ್ನು ಸಡಿಲಿಸುತ್ತದೆ ಎಂದೂ ಕೆಲವರ ಅಭಿಪ್ರಾಯ. ಮೊಟ್ಟೆಗಳಲ್ಲಿರುವ ಮರಿಗಳು ಕತ್ತರಿಸುವ ಆಯುಧವನ್ನು ಹೋಲುವ ತಮ್ಮ ಮೂತಿಯ ತುದಿಯಿಂದ ಮೊಟ್ಟೆಯ ಚಿಪ್ಪನ್ನು ಒಡೆದು ಹೊರಬರುತ್ತವೆ. ಆಗ ತಾಯಿ ಮೊಸಳೆ ಅವನ್ನು ನೀರಿನೆಡೆಗೆ ಕರೆದೊಯ್ಯುತ್ತದೆ. ಮೊಸಳೆ ಚರ್ಮ ಸಾಮಾನ್ಯವಾಗಿ 4-8 ಅಗಲ ಮತ್ತು 10-20 ಉದ್ದವಾಗಿರುವುದು. ಇದನ್ನು ಹದಮಾಡಿ ಕೈ ಚೀಲ. ಸೊಂಟದ ಪಟ್ಟಿಗಳು, ಜೋಡುಗಳು ಮುಂತಾದ ವಸ್ತುಗಳನ್ನು ತಯಾರಿಸುತ್ತಾರೆ. ಮೊಸಳೆ ಕೊಬ್ಬು ಮೀನೆಣ್ಣೆಯಂತೆ ಔಷಧಿಗಳಿಗೆ ಉಪಯುಕ್ತ.	(ನೋಡಿ- ಅಲಿಗೇಟರ್-ಮೊಸಳೆ)
ರ್ಹಿಂಕೋಕೆಫೇಲಿಯ ಗಣ: ಇದು ಡೈಆಪ್ಸಿಡದ ಇನ್ನೊಂದು ಗಣ. ಬಲು ಪುರಾತನವಾದದ್ದು. ಇದರಲ್ಲಿ ಉಳಿದಿರುವ ಒಂದೇ ಪ್ರಬೇಧ ಸ್ಪಿನೆಡಾನ್ ಪಂಕ್ಟೇಟಿಸ್. ಬಾಲ್ಯಾವಸ್ಥೆಯಲ್ಲಿ ಮೇಲ್ದವಡೆ, ಕೆಳದವಡೆಗಳಲ್ಲದೆ ಮೇಲಿನ ವಸಡಿನಲ್ಲೂ ಹಲ್ಲುಗಳಿರುತ್ತವೆ. ಪ್ರಾಣಿ ಬೆಳೆದಂತೆ ಕ್ರಮೇಣ ಹಲ್ಲುಗಳು ಸವೆದು ಪ್ರೌಢವಾಗುವುದರಲ್ಲಿ ಎಲ್ಲ ಹಲ್ಲುಗಳನ್ನೂ ಕಳೆದುಕೊಳ್ಳುತ್ತದೆ. ಇದರಿಂದಲೇ ಕೊಕ್ಕಿನಗೌಳಿ (ಹಲ್ಲಿ) ಎಂದು ಇದನ್ನು ಕರೆಯುತ್ತಾರೆ. ತಲೆಯ ಮೇಲ್ಭಾಗದಲ್ಲಿ ಮೂರನೆಯ ಕಣ್ಣಿದೆ. ಅದು ಈಗ ಕೆಲಸಮಾಡದಿದ್ದರೂ ಹಿಂದಿನ ಅಳಿದ ಉರಗಗಳ ಬುರುಡೆಯಲ್ಲಿ ಈ ರೀತಿಯ ಕಣ್ಣಿದ್ದು, ಮಿಕ್ಕೆರಡು ಕಣ್ಣುಗಳೊಡನೆ ಸಹಕರಿಸುತ್ತಿದ್ದಿರಬಹುದೆಂಬ ಊಹೆಗೆ ಬೆಂಬಲ ನೀಡುವಂತಿದೆ. ಈ ಪ್ರಾಣಿ ಕೋಟ್ಯಂತರ ವರ್ಷಗಳಿಂದ ಬಾಳಿದೆ. ಆದರೆ ಇದರಲ್ಲಿ ಅಂದಿನಿಂದ ಇಂದಿನವರೆಗೂ ಯಾವ ಬದಲಾವಣೆಯೂ ಆಗಿಲ್ಲ. ಉರಗಗಳಲ್ಲಿ ಒಂಟಿಯಾಗಿ ನಿಂತಿದ್ದರೂ ಈಗ ಬಾಳುತ್ತಿರುವ ಹಲ್ಲಿವರ್ಗದ ಅನೇಕ ಉರಗಗಳು ಬಹುಶಃ ಟಾಟರ ಪ್ರಾಣಿಯ ಜಾತಿಯಿಂದ ಪ್ರಬೇಧಗೊಂಡಿರಬೇಕೆಂದು ಊಹಿಸಲಾಗಿದೆ.

ಸ್ಕ್ವಮಾಟ ಗಣ: ಡೈಆಪ್ಸಿಡ ಲೆಪಿಡೊಸಾರಿಯ ಉಪವರ್ಗಕ್ಕೆ ಸೇರಿದೆ. ಸ್ಕ್ವಮಾಟವನ್ನು ಎರಡು ಉಪಗಣಗಳಾಗಿ ವಿಭಾಗಿಸಿದೆ- ಲ್ಯಾಸರ್‍ಟೀಲಿಯ ಮತ್ತು ಒಫಿಡಿಯ.
ಲ್ಯಾಸರ್‍ಟೀಲಿಯ ಉಪಗಣದಲ್ಲಿ ಹಲ್ಲಿಗಳು, ಊಸರವಳ್ಳಿ, ಗೆಕೊ(ಮನೆಯ ಹಲ್ಲಿ), ಓತಿ ಮುಂತಾದವು ಇವೆ. ಇವನ್ನು ಈ ಕೆಳಗಿನ ವಂಶಗಳಾಗಿ ವಿಭಾಗಿಸಿದೆ.: 1. ಗೆಕೊನಿಡೆ, 2. ಅಗಾಮಿಡೆ, 3. ಕಮೆಲಿಯೊಂಟಿಂಡೆ, 4. ಸಿನಸಿಡೆ, 5. ಲ್ಯಾಸರಟಿಡೆ. 6. ಆಂಗವಿಡೆ, 7. ವರಾನಿಡೆ.
ಈ ಉಪಗಣಗಳ ಪ್ರಾಣಿಗಳ ಲಕ್ಷಣಗಳು ಹೀಗಿವೆ: ದೇಹ ಪೂರ್ಣವಾಗಿ ಹುರುಪೆಗಳಿಂದ ಆವೃತವಾಗಿದೆ. ಕೆಲವು ಜಾತಿಗಳ ವಿನಃ ಮಿಕ್ಕವಲ್ಲಿ ಹಿಂಗಾಲು ಮತ್ತು ಮುಂಗಾಲುಗಳು ಚೆನ್ನಾಗಿ ಬೆಳೆದಿವೆ. ಎದೆಯಲ್ಲಿ ಎದೆಯ ಮೂಳೆ ಇದೆ; ಬೆನ್ನೆಲುಬಿನ ಕಶೇರುಮಣಿಗಳು ನಿರ್ದಿಷ್ಟವಾಗಿಲ್ಲ. ಕಶೇರುಮಣಿಗಳನ್ನು ಬೆನ್ನೆಲುಬಿನ ಕತ್ತಿನಭಾಗ (ಸರ್ವೈಕಲ್). ಎದೆಯಭಾಗ (ತೊರಾಸಿಕ್), ಉದರಭಾಗ (ಲಂಭಾರ್), ಕಟಿಭಾಗ(ಸೇಕ್ರಲ್) ಮತ್ತು ಬಾಲದ ಭಾಗಗಳಾಗಿ (ಕಾಡಲ್) ವಿಂಗಡಿಸಬಹುದು. ಎದೆಯ ಮೂಳೆಗಳ ಸಂಖ್ಯೆ ಹೆಚ್ಚು. ಕತ್ತಿನ ಮಣಿಗಳು ಎದೆಯ ಪಕ್ಕೆಲುಬುಗಳನ್ನೂ ಹೊಂದಿವೆ. ಇದರ ಬಾಯಿಯನ್ನು ಹಾವಿನ ಬಾಯಿಯಂತೆ ಅಗಲಿಸಲು ಸಾಧ್ಯವಿಲ್ಲ. ಹೊರಕಿವಿಯ ರಂಧ್ರಗಳು ಚಲಿಸಬಲ್ಲ ಕಣ್ಣಿನ ಗುಡ್ಡೆಗಳೂ ಇವೆ. ಕೆಲವು ಬಾಲದ ಭಾಗವನ್ನು ಸುಲಭವಾಗಿ ಬೇರ್ಪಡಿಸಿಕೊಳ್ಳಬಲ್ಲುವು; ಕತ್ತರಿಸಿದ ಬಾಲ ಮತ್ತು ಕಾಲುಗಳ ಭಾಗಗಳು ಪುನಃಶ್ಚೇತನಗೊಳ್ಳಬಲ್ಲವು. ಲಾಲಾಗ್ರಂಥಿಗಳು ಬಾಯಿಯ ಕೆಳಭಾಗದಲ್ಲಿವೆ. ಶ್ವಾಸಕೋಶಗಳು ಉದ್ದ ಮತ್ತು ಅಂಡಾಕಾರವಾಗಿವೆ. ಶ್ವಾಸೋಚ್ಚ್ವಾಸಕ್ರಿಯೆ ಪಕ್ಕೆಲುಬುಗಳ ನೆರವಿನಿಂದ ನಡೆಯುವುದು. ಊಸರವಳ್ಳಿ ಮತ್ತು ಗೆಕೋಗಳಲ್ಲಿ ಶ್ವಾಸಕೋಶಗಳು ಗಾಳಿಯ ಚೀಲಗಳಾಗಿ ವಿಸ್ತರಿಸಿವೆ. ಇವು ಪಕ್ಷಿಗಳ ಶ್ವಾಸಕೋಶಗಳೊಳಗಿನ ಗಾಳಿಯ ಗೂಡುಗಳನ್ನು ಸೂಚಿಸುತ್ತವೆ. 
(ನೋಡಿ- ಇಗ್ವಾನ-(ಕಡಲಗೌಳಿ))
(ನೋಡಿ- ಇಗ್ವಾನೊಡಾನ್)
(ನೋಡಿ- ಉಡ)-
(ನೋಡಿ- ಊಸರವಳ್ಳಿ) 
(ನೋಡಿ- ಓತಿ-(ಕ್ಯಾಲೋಟಿಸ್)) 

ಹಾವುಗಳನ್ನು ಒಫಿಡಿಯ ಉಪಗಣಕ್ಕೆ ಸೇರಿಸಲಾಗಿದೆ. ಈ ಪ್ರಾಣಿಗಳನ್ನು ಅವಯವಗಳಿಲ್ಲದ (ವಿದೌಟ್ ಲಿಂಬ್ಸ) ಸ್ಕ್ವಮಾಟ ಎಂದು ಕರೆಯುವುದುಂಟು. 
ಒಫಿಡಿಯ ಲಕ್ಷಣಗಳು ಹೀಗಿವೆ. ಚರ್ಮ ಹುರುಪೆಗಳಿಂದ ಆವೃತವಾಗಿದೆ. ಹೊರಚರ್ಮ ಕಳಚುವುದನ್ನು ಪೊರೆ ಬಿಡುವುದು ಎನ್ನುತ್ತೇವೆ. ವರ್ಷಕ್ಕೆ 5-6ಸಲ ಪೊರೆ ಬಿಡಬಲ್ಲ ಹಾವುಗಳೂ ಉಂಟು, ಆದ್ದರಿಂದ ಪೊರೆ ಸತತವಾಗಿ ಬೆಳೆಯಬಲ್ಲದು: ಬಾಯಿ ವಿಶಾಲವಾಗಿ ಹಿಗ್ಗುವಂತಿದೆ. ಕಣ್ಣಿಗೆ ರೆಪ್ಪೆಯಿಲ್ಲ. ಬದಲು ಪಾರದರ್ಶಕ ಹುರುಪೆಯುಂಟು. ಇದು ಪೊರೆ ಬಿಡುವಾಗ ಬಿದ್ದು ಹೋಗಿ ಹೊಸ ಹುರುಪೆ ಬೆಳೆಯುತ್ತದೆ. ಹೊರಕಿವಿಯಾಗಲೀ ಕಿವಿಯ ತಮಟೆಯಾಗಲೀ ಇಲ್ಲದಿದ್ದರೂ ಸಹ ಒಳಕಿವಿಯುಂಟು. ಗ್ರಹಿಸಿದ ಶಬ್ದಕಂಪನಗಳು ಒಳಕಿವಿಯನ್ನು ಸೇರುತ್ತವೆ. ಮುಂದೂಡಬಲ್ಲ ಮತ್ತು ಹಿಂದಕ್ಕೆ ಎಳೆದುಕೊಳ್ಳಬಹುದಾದ ತುದಿ ಸೀಳಿದ ನಾಲಿಗೆ ಹಾವಿನ ವಿಶೇಷವಾದ ಸ್ಪರ್ಶೇಂದ್ರಿಯ. ಸ್ವತಃ ಮೂಸಿನೋಡದಿದ್ದರೂ ವಾಸನೆಯಿರುವ ಕಣಗಳನ್ನು ಬಾಯೊಳಕ್ಕೆ ಎಳೆದುಕೊಂಡು ಅವು ಘ್ರಾಣೇಂದ್ರಿಯಗಳ ಸಂಪರ್ಕ ಹೊಂದುವಂತೆ ಮಾಡುತ್ತದೆ. ತಲೆ, ಎದೆ ಮತ್ತು ಬಾಲಗಳಿಗೆ ಪರಸ್ಪರ ನಿರ್ದಿಷ್ಟವಾದ ಎಲ್ಲೆಗಳು ಇಲ್ಲ. ಇದು ಕೊರಕಲು ಹಳ್ಳಗಳಲ್ಲಿ, ಕಲ್ಲುಗಳ ಸಂಧಿಯಲ್ಲಿ ಚಲಿಸಲು ಸಹಾಯಕವಾದ ದೇಹದ ಒಂದು ಹೊಂದಿಕೆ. ಕಿರುದಾದ ಉದ್ದವಾದ ದೇಹಕ್ಕೆ ಅನುಗುಣವಾಗಿ ಒಳಭಾಗದ ಅಂಗಗಳೂ ಕೂಡ ಬದಲಾವಣೆಗಳನ್ನು ಹೊಂದಿವೆ. ಸಾಮಾನ್ಯವಾಗಿ ಒಂದು ಶ್ವಾಸಕೋಶ, ಅದರಲ್ಲೂ ಎಡ ಶ್ವಾಸಕೋಶ ಮತ್ತೊಂದಕ್ಕಿಂತ ಬಹಳ ಕಿರಿದು, ಕೆಲವು ವೇಳೆ ಒಂದೇ ಒಂದು ಶ್ವಾಸಕೋಶ ಇರುವುದೂ ಉಂಟು. ಪಿತ್ತಕೋಶ ಬಲು ಉದ್ದ. ಮೂತ್ರಪಿಂಡಗಳು ಎದುರುಬದಿರಾಗಿರುವುದಿಲ್ಲ. ಬೆನ್ನೆಲುಬಿನ ಕಶೇರುಮಣಿಗಳ ಸಂಖ್ಯೆ ಬಲು ಹೆಚ್ಚು. ಪ್ರತಿಯೊಂದು ಕಶೇರುಮಣಿಗೂ ಒಂದು ಜೊತೆ ಪಕ್ಕೆಲುಬು ಜೋಡಿಸಲ್ಪಟ್ಟಿರುವುದರಿಂದ, ಪಕ್ಕೆಲುಬುಗಳ ಸಂಖ್ಯೆಯೂ ಹೆಚ್ಚು. ಉದರಭಾಗದಲ್ಲೂ ಅಗಲವಾದ ಉದರ ಫಲಕಗಳಿವೆ. ಈ ಫಲಕಗಳು ಚಾವಣಿಯ ಹೆಂಚುಗಳಂತೆ ಜೋಡಿಸಲ್ಪಟ್ಟಿವೆ. ಪ್ರತಿಯೊಂದು ಫಲಕಕ್ಕೂ ಅದರ ಮುಂಭಾಗದಲ್ಲಿ ಒಂದೊಂದು ಜೊತೆ ಪಕ್ಕೆಲುಬು ಸ್ನಾಯುಗಳ ಸಹಾಯದಿಂದ ಚಲಿಸುವ ರೀತಿಯಲ್ಲಿ ಸೇರಿಸಲ್ಪಟ್ಟಿವೆ. ಇದರಿಂದ ಎದೆಯ ಗೂಡು ಮಾಯವಾಗಿದೆ. ಒಂದೇ ಪಾಶ್ರ್ವದ ಅನುಕ್ರಮವಾದ ಪಕ್ಕೆಲುಬುಗಳ ನಡುವೆ ಇರುವ ಸ್ನಾಯುಗಳ (ಇಂಟರ್‍ಕೋಸ್ಟಲ್ ಮಸಲ್ಸ್) ಸಂಕುಚನೆ, ವಿಕಸನೆಗಳಿಂದ ಪಕ್ಕೆಲುಬುಗಳು ಚಲಿಸಲು ಪ್ರಾರಂಭಿಸುತ್ತದೆ. ಪಕ್ಕೆಲುಬುಗಳು ಮುಂದಕ್ಕೆ ಸರಿದಾಗ ಫಲಕದ ಮುಂದಿನ ಅಂಚು ನೆಲದ ಏರುತಗ್ಗುಗಳನ್ನು ಬಿಗಿಯಾಗಿ ಅಪ್ಪಿಕೊಳ್ಳುವುದು. ಅನಂತರ ಸ್ನಾಯುಗಳ ಸಂಕುಚನೆ ಮತ್ತು ವಿಕಸನೆಗಳಿಂದ ದೇಹದ ಹಿಂಭಾಗ ಮುಂದಕ್ಕೆ ಎಳೆಯಲ್ಪಡುವುದು. ಈ ಚಲನೆಗೆ ಬಾಲವೂ ಸಹಾಯ ಮಾಡುತ್ತದೆ. ಉದರ ಫಲಕಗಳ ಚಲನೆಯ ವೈಚಿತ್ರ್ಯವೇ ಅದು ಡೊಂಕುಡೊಂಕಾಗಿ ಹರಿಯಲು ಕಾರಣ. ಮರಹತ್ತುವ ಹಾವುಗಳಲ್ಲಿ ಉದರ ಫಲಕಗಳು ದೋಣಿಯ ತಳಭಾಗದಂತೆ ಜೋಡಿಸಲ್ಪಟ್ಟಿರುತ್ತವೆ. ಇದರಿಂದಲೇ ಅವು ನೇರವಾಗಿ ಮರವನ್ನು ಹತ್ತಬಲ್ಲವು. ನೀರಿನಲ್ಲಿ ವಾಸಿಸುವ ಹಾವುಗಳಿಗೆ ಉದರಫಲಕಗಳ ಅಗತ್ಯವಿಲ್ಲ.

ತನ್ನ ದೇಹದ ಗಾತ್ರಕ್ಕಿಂತಲೂ ದೊಡ್ಡ ಗಾತ್ರದ ಪ್ರಾಣಿಗಳನ್ನು ಹಾವು ನುಂಗಬಲ್ಲದೆಂಬುದು ನಿಜಕ್ಕೂ ಒಂದು ಆಶ್ಚರ್ಯಕರವಾದ ಸಂಗತಿ. ಇದರ ಗುಟ್ಟು ಅದರ ದೇಹದ ಅಸ್ಥಿಪಂಜರದ ಜೋಡಣೆಯಲ್ಲಿದೆ. ಆಹಾರವನ್ನು ನುಂಗಲು ದೇಹರಚನೆಯಲ್ಲಿರುವ ಹೊಂದಿಕೆಗಗಳು ಹೀಗಿವೆ: 1. ದವಡೆಯ ಮೂಳೆಗಳ ಅಂಚಿನಲ್ಲಿ ಮೂರು ಪಂಕ್ತಿಯ ಅನೇಕ ಚೂಪಾದ ಮತ್ತು ಹಿಮ್ಮುಖವಾಗಿ ಬಗ್ಗಿರುವ ಹಲ್ಲುಗಳಿವೆ. 2. ಈ ಹಲ್ಲುಗಳು ಮುರಿದರೆ ಹೊಸ ಹಲ್ಲುಗಳು ಹುಟ್ಟುತ್ತವೆ. 3. ಕೆಳದವಡೆ ನೇರವಾಗಿ ಮೇಲ್ದವಡೆಗೆ ಜೋಡಿಸಿಕೊಂಡಿಲ್ಲ. ಬದಲು ತಲೆಯ ಬುರುಡೆಗೆ ಅಂಟಿರುವ ಕ್ವಾಡ್ರೇಟ್ ಮೂಳೆಗೆ ಜೋಡಿಸಿಕೊಂಡಿದೆ. ಈ ಜೋಡಣೆಯಿಂದ ದವಡೆ ಕೆಳಕ್ಕೂ ಮುಂದಕ್ಕೂ ಚಲಿಸಿ ಬಾಯಿಯ ಮುಂಭಾಗದಷ್ಟೇ ಅಗಲವಾಗಿ ಹಿಂಭಾಗದಲ್ಲಿಯೂ ತೆರೆಯಬಲ್ಲದು. 4. ಕೆಳದವಡೆಯ ಎರಡು ಭಾಗಗಳು ಮುಂಭಾಗದಲ್ಲಿ ಸೇರಿಲ್ಲ: ಆದರೆ ಸ್ಥಿತಿಸ್ಥಾಪಕಶಕ್ತಿಯುಳ್ಳ ಅಸ್ಥಿಬಂಧದ ತಂತುವಿನಿಂದ (ಲಿಗಮೆಂಟ್) ಜೋಡಣೆಗೊಂಡಿದೆ. ಇದರಿಂದ ಕೆಳದವಡೆಯ ಎರಡು ಭಾಗಗಳೂ ಪರ್ಯಾಯವಾಗಿ ಹಿಂದಕ್ಕೂ ಮುಂದಕ್ಕೂ ಚಲಿಸಬಲ್ಲವು. 5. ಆಹಾರವನ್ನು ನುಂಗುವಾಗ ಕೆಳದವಡೆಯ ಒಂದು ಭಾಗವನ್ನು ಮೊದಲು ಮುಂದಕ್ಕೆ ಚಾಚಿ ಬೇಟೆಯ ಪ್ರಾಣಿಯ ದೇಹವನ್ನು ಬಲವಾಗಿ ಹಿಡಿದು ಬಾಯಿಯೊಳಕ್ಕೆ ಎಳೆದುಕೊಳ್ಳುತ್ತದೆ. ಅಷ್ಟರಲ್ಲಿ ದವಡೆಯ ಮತ್ತೊಂದು ಭಾಗವನ್ನು ಮುಂದಕ್ಕೆ ಎಳೆದು ಪ್ರಾಣಿಯ ಮತ್ತೊಂದು ಭಾಗವನ್ನು ಹಿಡಿಯುತ್ತದೆ. ದವಡೆಯ ಭಾಗಗಳ ಈ ಪರ್ಯಾಯ ಚಲನೆಯನ್ನು ಬಾವಿಯಿಂದ ನೀರು ಸೇದುವಾಗ ರಾಟೆಯಿಂದ ಹಗ್ಗವನ್ನೆಳೆಯುವ ಕೈಗಳ ಚಲನೆಗೆ ಹೋಲಿಸಬಹುದು. 6. ಉಸಿರಾಟದ ಕ್ರಮದಲ್ಲಿ ಮಾರ್ಪಾಡುಗಳು ಏರ್ಪಟ್ಟಿವೆ. ದೊಡ್ಡ ಪ್ರಾಣಿಯನ್ನು ನುಂಗಲು ಸ್ವಲ್ಪ ಸಮಯ ಹಿಡಿಯುವುದರಿಂದ ಆ ವೇಳೆಯಲ್ಲಿ ನಾಸಿಕ ರಂಧ್ರಗಳ ಮೂಲಕ ಗಾಳಿ ಪ್ರವೇಶಿಸಲು ಸಾಧ್ಯವಾಗದೇ ಉಸಿರಾಟಕ್ಕೆ ತೊಂದರೆಯಾಗಬಹುದು. ಆದ್ದರಿಂದ ಇಂಥ ಸಂದರ್ಭಗಳಲ್ಲಿ ಶ್ವಾಸನಾಳದ ರಂಧ್ರವನ್ನು ಕೆಳದವಡೆಯ ಎರಡು ಭಾಗಗಳ ಮಧ್ಯೆ ನೂಕಿ ಗಾಳಿಯನ್ನು ನೇರವಾಗಿ ಶ್ವಾಸಕೋಶಗಳೊಳಕ್ಕೆ ತೆಗೆದುಕೊಳ್ಳುತ್ತದೆ. 7. ಗಂಟಲು. ಅನ್ನನಾಳ ಮತ್ತು ಜಠರಗಳು ಮಿತಿಮೀರಿ ಹಿಗ್ಗಬಲ್ಲವು. ಅವುಗಳಿಗೆ ವಿಶೇಷ ಸ್ಥಿತಿಸ್ಥಾಪಕಶಕ್ತಿ ಇದೆ. ಅಷ್ಟು ಹೆಚ್ಚು ಪರಿಮಾಣದ ಆಹಾರವನ್ನು ಅರಗಿಸಿಕೊಳ್ಳಲು ಸಹಾಯಕವಾಗುವಂತೆ ಜೀರ್ಣರಸಗಳು ಅತಿ ತೀಕ್ಷ್ಣವಾಗಿವೆ. 8. ಎದೆಯ ಮೂಳೆ, ಭುಜ ಮತ್ತು ಸೊಂಟಪಟ್ಟಿಗಳು ಇಲ್ಲ. ಅಲ್ಲದೆ ಸುಲಭವಾಗಿ ಬಾಗುವಂಥ ಪಕ್ಕೆಲುಬುಗಳು ಇವೆ. ಈ ಅಸ್ಥಿಪಂಜರದ ರಚನೆಯಿಂದ ದೇಹ ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಹಿಗ್ಗಬಲ್ಲುದು. 9. ಆಹಾರವನ್ನು ನುಂಗುವಾಗ ತನ್ನ ಮೃದುವಾದ, ತೆಳುವಾದ, ಸೀಳಿರುವ ನಾಲಗೆಯ ಹಿಂದಿರುವ ರಕ್ಷಾಕವಚದೊಳಕ್ಕೆ ಎಳೆದುಕೊಳ್ಳುವ ಸಾಮಥ್ರ್ಯವಿದೆ.

ಹಾವುಗಳು ದೀರ್ಘಕಾಲ ಆಹಾರವಿಲ್ಲದೇ ಜೀವಿಸಬಲ್ಲವು. ಅದರಲ್ಲೂ ಸೆರೆಯಲ್ಲಿಟ್ಟ ಹಾವುಗಳಿಗೆ ಹಸಿವೆಯ ತೀಕ್ಷ್ಣತೆ ಬಲು ಕಡಿಮೆ. ನ್ಯೂಯಾರ್ಕಿನ ಪ್ರಾಣಿರಕ್ಷಣಾ ಉದ್ಯಾನಕ್ಕೆ ತಂದಿದ್ದ ದೈತ್ಯ ಹೆಬ್ಬಾವೊಂದು ಎರಡು ವರ್ಷಗಳ ದೀರ್ಘಕಾಲ ನಿರಶನದಲ್ಲಿದ್ದುದರ ನಿದರ್ಶನವಿದೆ. ಚಳಿಗಾಲದಲ್ಲಿ ಹಾವುಗಳು ಅಹಾರವಿಲ್ಲದೇ ದೀರ್ಘನಿದ್ರೆಯಲ್ಲಿರಬಲ್ಲವು.

ವಿಷದ ಹಾವುಗಳಲ್ಲಿ ಲಾಲಾಗ್ರಂಥಿಗಳು ಅತ್ಯಂತ ಮಾರಕವಾದ ವಿಷವನ್ನು ಉತ್ಪತ್ತಿ ಮಾಡಬಲ್ಲ ಗ್ರಂಥಿಗಳಾಗಿ ಮಾರ್ಪಟ್ಟಿವೆ. ಮೇಲ್ದವಡೆಯ ಎರಡು ಪಕ್ಕಗಳಲ್ಲೂ ಚೀಲಗಳಂತೆ ಕಾಣುವ ಎರಡು ವಿಷದ ಗ್ರಂಥಿಗಳಿವೆ, ಇವುಗಳಿಗೆ ಸೇರಿರುವಂತೆ ಬಾಗಿರುವ ವಿಷದ ಹಲ್ಲುಗಳಿವೆ. ಇವುಗಳ ಉದ್ದಕ್ಕೂ ಮೇಲ್ಭಾಗದಲ್ಲಾಗಲೀ ಒಳಗಾಗಲೀ ಕಾಲುವೆ ಇದೆ. ಸಾಮಾನ್ಯವಾಗಿ ಬಗ್ಗಿ ನಿಂತಿರುವ ಈ ಹಲ್ಲುಗಳು ಬೇಟೆಯ ಪ್ರಾಣಿ ಸಿಕ್ಕಾಗ ನೇರವಾಗಿ ನಿಂತು ಅದಕ್ಕೆ ಹೊಡೆಯುವುದು. ಇದರಿಂದ ಮೇಲ್ದವಡೆಯ ಎಲುಬುಗಳು ಚಲಿಸಿ ವಿಷದ ಚೀಲವನ್ನು ಒತ್ತುತ್ತವೆ. ಕೂಡಲೇ ವೈದ್ಯರ ಪಿಚಕಾರಿಯಂತೆ ಕಾಲುವೆಯ ಮೂಲಕ ವಿಷ ಪ್ರಾಣಿಯ ಮಾಂಸಖಂಡದೊಳಗೆ ನುಗ್ಗುತ್ತದೆ. ರೆಪ್ಪೆ ಬಡಿಯುವುದರೊಳಗೆ ಇಷ್ಟು ಚಲನೆಗಳೂ ನಡೆದುಹೋಗಿರುತ್ತದೆ. ವಿಷ, ರಕ್ತವನ್ನು ಸೇರಿ ನರವ್ಯೂಹ, ಹೃದಯ ಮತ್ತು ಶ್ವಾಸಾಂಗಗಳನ್ನು ದುರ್ಬಲಗೊಳಿಸಿ ಕ್ರಮೇಣ ಪ್ರಾಣಿಯ ಸಾವಿಗೆ ಕಾರಣವಾಗುತ್ತದೆ.

ಕಿಲೋನಿಯ ಗಣ: ಅನಪ್ಸಿಡ ನೆಲ, ಸಿಹಿನೀರು ಮತ್ತು ಕಡಲಾಮೆಗಳನ್ನು ಹೊಂದಿರುವ ಗಣ. ಈಗ ಉಳಿದಿರುವ ಸರೀಸೃಪಗಳ ಪೈಕಿ ಬಹಳ ಪ್ರಾಚೀನವಾದ ಪ್ರಾಣಿಗಳು ಈ ಆಮೆಗಳು. ಕಪಾಲದ ಎಲುಬುಗಳಲ್ಲಿ ರಂಧ್ರವಿಲ್ಲದೇ ಒತ್ತಾಗಿ ಜೋಡಿಸಿರುವುದು ಆದಿ ಉರಗಗಳ ಒಂದು ಲಕ್ಷಣ. ಈ ಕಾರಣದಿಂದಲೇ ಇದರ ಪೂರ್ವಜರು 20 ಕೋಟಿ ವರ್ಷಗಳ ಹಿಂದೆ ಅಂದರೆ ದೈತ್ಯೋರಗಗಳು ಕಾಣಿಸುವ ಮೊದಲೇ, ಭೂಮಿಯ ಮೇಲೆ ಜನಿಸಿರಬಹುದೆಂಬ ಅಭಿಪ್ರಾಯವಿದೆ. ಬಲಿಷ್ಠವಾದ ದೈತ್ಯೋರಗಗಳು ಬಾಳಲಾರದೆ ಲಯವಾದರೂ ಕೊನೆಯಪಕ್ಷ 15 ಕೋಟಿ ವರ್ಷಗಳಿಂದ ಆಮೆಯ ಕುಲ ಹೆಚ್ಚು ಬದಲಾವಣೆ ಇಲ್ಲದೆ ಬದುಕಿರುವುದು ಒಂದು ಆಶ್ಚರ್ಯ. ಈ ದೀರ್ಘಕಾಲದ ಉಳಿವಿಗೆ ಬಹುಶಃ ಆಮೆಯ ವಿಶಿಷ್ಟವಾದ ಅಸ್ಥಿಪಂಜರವೇ ಒಂದು ಕಾರಣವಿರಬಹುದು. 
(ನೋಡಿ- ಆಮೆ)-
(ನೋಡಿ- ಕಡಲಾಮೆಗಳು)

ಸಾಮಾನ್ಯವಾಗಿ ಭೂಮಿಯ ಆಮೆಗಳನ್ನು ಟಾರ್ಟಾಯ್ಸ್ ಎಂದೂ, ಗಟ್ಟಿಚಿಪ್ಪಿನ ಸಿಹಿ ನೀರಿನ ಅಮೆಗಳನ್ನು ಟೆರ್ರಾಪಿನ್ ಎಂದೂ, ಸಮುದ್ರದಲ್ಲಿ ವಾಸಿಸುವ ಆಮೆಗಳನ್ನು ಟರ್ಟಲ್ಸ್ ಅಥವಾ ಕಡಲಾಮೆಗಳೆಂದೂ ಡಾ. ರೇಮಾಂಡ್ ಡಿಟ್‍ಮಾರ್ಸ್ ವರ್ಗೀಕರಿಸಿದ್ದಾನೆ.

ಸಾರಾಂಶ: ಕಶೇರುಗಳನ್ನೆಲ್ಲ ಒಟ್ಟಾಗಿ ನೋಡಿದರೆ ಸರೀಸೃಪಗಳು ಅವುಗಳ ಮಧ್ಯದ ಸಮೂಹದಲ್ಲಿವೆ ಎಂದು ಹೇಳಬಹುದು. ಕಣ್ಮರೆಯಾದ ಕೆಲವು ಆದಿ ಉರಗಗಳು, ಹಲವು ಅದಿ ದ್ವಿಚರಿಗಳಿಗೆ ನಿಕಟ ಸಂಬಂಧವನ್ನು ತೋರಿಸುತ್ತವೆ. ಮತ್ತೆ ಕೆಲವು ಉರಗಗಳಲ್ಲಿರುವ ಗುಣಲಕ್ಷಣಗಳು ಪುನಃ ಪಕ್ಷಿಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಂಡಿರುವುದರಿಂದ ಪಕ್ಷಿಗಳು, ಆದಿ ಥೀಕೋಡಾಂಟ್ ಸರೀಸೃಪಗಳ ಕಾಂಡದಿಂದ ವಿಕಸಿಸಿದವು ಎಂಬ ವಾದವನ್ನು ಸಮರ್ಥಿಸುತ್ತವೆ. ಸ್ತನಿಗಳು ಕೂಡ ಬಹುಶಃ ಉರಗದ ಕಾಂಡದ ಹೆಚ್ಚು ಮುಂದುವರೆದ ಆದಿಭಾಗದ ಥೀರಾಪ್ಸಿಡ್‍ನಿಂದ ವಿಕಸಿಸಿದವು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ.

ಈ ಮೇಲೆ ಹೇಳಿದ ಕಾರಣಗಳಿಂದಲೇ ಉರಗಗಳು ಜೀವವಿಜ್ಞಾನಿಯ ಕುತೂಹಲವನ್ನು ಹೆಚ್ಚು ಕೆರಳಿಸಿವೆ ಎಂದು ಹೇಳಬಹುದು. ಒಂದು ಸಾಮಾನ್ಯ ಬಿಂದುವಿನಿಂದ ಪ್ರಾರಂಭವಾದ ಪ್ರಾಣಿವರ್ಗ ವಿವಿಧ ವಾತಾವರಣಗಳ ಅಗತ್ಯಗಳಿಗೆ ಅನುಗುಣವಾಗಿ ತನ್ನ ದೇಹವನ್ನು ಅಳವಡಿಸಿಕೊಳ್ಳುತ್ತ ಹೋಗುತ್ತದೆ. ಇದರಿಂದ ನಾನಾ ಬಗೆಯ ಪ್ರಬೇಧಗಳು ಉಂಟಾಗುವುದು ಕಂಡುಬರುತ್ತದೆ. ಈ ಒಂದು ನಿಯಮವನ್ನು ಆಸ್‍ಬಾರ್ನ್ ಎಂಬ ವಿಜ್ಞಾನಿ ಮೊದಲಬಾರಿಗೆ ಹೊಂದಾಣಿಕೆಯ ವಿಕಿರಣ (ಅಡಾಪ್ಟಿವ್ ರೇಡಿಯೇಷನ್) ಎಂಬುದಾಗಿ ಕರೆದ. ಆತ ಉರಗವರ್ಗದ ಪ್ರಾಣಿಗಳ ವಿಕಸನದ ಆಧಾರದ ಮೇಲೆಯೇ ಈ ವಾದವನ್ನು ಪ್ರತಿಪಾದಿಸಿದ್ದು. ಆದಿ ಸರೀಸೃಪಗಳು ಜೀವನ ಸಂಗ್ರಾಮದಲ್ಲಿ ಗೆದ್ದು ಬದುಕಲು ಅನೇಕ ಮಾರ್ಗಗಳನ್ನು ಹಿಡಿದವು. ಟೀರೋಸಾರುಗಳಂಥವು ಖಗವಾಸಿಗಳಾದರೆ ಇಕ್ತಿಯೋಸಾರಿನಂಥವು ಜಲವಾಸಕ್ಕೂ, ಸೌರಪೋಡ ದೈತ್ಯೋರಗಗಳಂಥವು ದ್ವಿಚರಿ ಜೀವನಕ್ಕೂ, ಹಾವಿನಂಥ ಕೆಲವು ಬಿಲ ಮತ್ತು ಕೊರಕಲುಗಳ ಜೀವನಕ್ಕೂ ಮತ್ತೆ ಕೆಲವು ಮರವಾಸಿ ಜೀವನಕ್ಕೂ ತಕ್ಕಂತೆ ದೇಹವನ್ನು ಅಳವಡಿಸಿಕೊಂಡವು. ಇವೆಲ್ಲ ಸಂದರ್ಭಗಳಲ್ಲೂ ಉಂಟಾಗಿರುವ ಮಾರ್ಪಾಟುಗಳು ಜೀವವಿಕಾಸದ ಹೊಂದಾಣಿಕೆಯನ್ನು ಎತ್ತಿತೋರಿಸುತ್ತದೆ.

			 (ಎಚ್.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ